ನಟ ಪ್ರಕಾಶ್‌ರೈ ವಿರುದ್ಧ ರಾಜ್ಯ ಬಿಜೆಪಿ ನಾಯಕರ ವಾಗ್ದಾಳಿ
‘ಪ್ರಕಾಶ್ ರೈ ಅವರಿಗೆ ಪ್ರಚಾರ ಗಿಟ್ಟಿಸುವ ಹುಚ್ಚಿದ್ದರೆ ರಾಜಕೀಯ ಪಕ್ಷ ಕಟ್ಟಲಿ’

ಬೆಂಗಳೂರು, ಅ.3: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರಮೋದಿ ಮೌನವಹಿಸಿದ್ದಾರೆ. ಅವರು ನನಗಿಂತಲೂ ಅತ್ಯುತ್ತಮ ನಟ ಎಂದು ಹೇಳಿಕೆ ನೀಡಿದ್ದ ಚಿತ್ರನಟ ಪ್ರಕಾಶ್ ರೈ ವಿರುದ್ಧ ರಾಜ್ಯ ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.
ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ಸುರೇಶ್ ಕುಮಾರ್ ಮಾತನಾಡಿ, ನಟ ಪ್ರಕಾಶ್ ರೈ ಅವರಿಗೆ ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಹುಚ್ಚು ಇದ್ದರೆ ಯಾವುದಾದರೂ ರಾಜಕೀಯ ಪಕ್ಷ ಕಟ್ಟುಕೊಳ್ಳಲಿ. ಆದರೆ, ಉನ್ನತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಪ್ರಕಾಶ್ ರೈ ಒಬ್ಬ ಅತ್ಯುತ್ತಮ ನಟ. ಸಿನೆಮಾದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದಂತೆ ಡಿವೈಎಫ್‌ಐ ಕಾರ್ಯಕ್ರಮದಲ್ಲಿ ಅವರು ಮಾತನಾಡಿರುವುದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ವ್ಯಂಗ್ಯವಾಡಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೆಲವರು ಪ್ರಧಾನಿ ಮೋದಿಯನ್ನು ಟೀಕೆ ಮಾಡಿದರೆ ನಾವು ರಾತ್ರೋರಾತ್ರಿ ದೊಡ್ಡ ವ್ಯಕ್ತಿಗಳಾಗಿ ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ನರೇಂದ್ರ ಮೋದಿಯವರನ್ನು ಟೀಕಿಸುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ನೀವೇ ಮಸಿ ಬಳಿದುಕೊಳ್ಳುತ್ತೀರಿ ಎಂದು ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾರೋ ಒಬ್ಬರು ಮೋದಿಯನ್ನು ಟೀಕೆ ಮಾಡಿದರೆ ಅವರೇನು ಕುಗ್ಗಿ ಹೋಗುವುದಿಲ್ಲ. ಈಗಲೂ ದೇಶದ ಹಿತದೃಷ್ಟಿಯಿಂದ ಅವರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅನೇಕ ತಜ್ಞರ ಸಲಹೆ ಪಡೆದು ಯಶಸ್ವಿಯಾಗಿ ಆಡಳಿತ ನಡೆಸುತ್ತಿರುವಾಗ ಪ್ರಕಾಶ್ ರೈ ಅವರು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ನಾಯಕರಿಗೆ ಗಾಂಧಿ ಜಯಂತಿ ದಿನದಂದು ರಾಜಕೀಯ ಮಾತನಾಡಬಾರದೆಂಬ ಕನಿಷ್ಠ ಜ್ಞಾನವಿಲ್ಲ. ಹೈಕಮಾಂಡ್ ಮೆಚ್ಚಿಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮನಬಂದಂತೆ ಮಾತನಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದರು.
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿ ನಡೆಯಿತೋ, ಅಥವಾ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಜಯಂತಿ ನಡೆಯಿತೇ ಎಂಬುವುದು ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಮೊದಲು ನಿಮ್ಮ ಪಕ್ಷದಲ್ಲಿರುವ ಹುಳುಕುಗಳನ್ನು ಸರಿಮಾಡಿಕೊಳ್ಳಬೇಕು. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಮಂಗಳೂರು ಗಲಭೆ ಪ್ರಕರಣಕ್ಕೆ ರಾಜಕೀಯ ಪಿತೂರಿ ಕಾರಣ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿಯವರು ಹೇಳಿರುವುದು ಸರಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಸಚಿವ ಯು.ಟಿ.ಖಾದರ್ ನಡವಳಿಕೆಯೇ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ವಿರುದ್ಧ ನಟ ಪ್ರಕಾಶ್ ರೈ ಅವರು ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಇದು ಖಂಡನೀಯ. ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ







