ರೈಲ್ವೇ ಹಳಿ ಎತ್ತರಗೊಳಿಸುವ ವೆಚ್ಚ ಬುಲೆಟ್ ಟ್ರೈನ್ ವೆಚ್ಚಕ್ಕಿಂತ ಅಧಿಕವಾಗಲು ಸಾಧ್ಯವೇ: ಗೋಯಲ್

ಹೊಸದಿಲ್ಲಿ, ಅ.3: ರೈಲ್ವೇ ಹಳಿಯನ್ನು ಎತ್ತರಗೊಳಿಸುವ ವೆಚ್ಚ ಬುಲೆಟ್ ಟ್ರೈನ್‌ನ ವೆಚ್ಚಕ್ಕಿಂತಲೂ ಹೆಚ್ಚಾಗಲು ಹೇಗೆ ಸಾಧ್ಯ..?
ಎಲ್ಫಿನ್‌ಸ್ಟೋನ್ ರೈಲ್ವೇ ಮೇಲ್ಸೇತುವೆಯಲ್ಲಿ ಶುಕ್ರವಾರ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಶನಿವಾರ ಮುಂಬೈ ರೈಲ್‌ವಿಕಾಸ್ ಕಾರ್ಪೊರೇಶನ್(ಎಂಆರ್‌ವಿಸಿ)ನ ಅಧಿಕಾರಿಗಳೊಂದಿಗೆ ನಡೆಸಿದ ಸುದೀರ್ಘ ಸಭೆಯಲ್ಲಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಕೇಳಿದ ಪ್ರಶ್ನೆಯಿದು.
ನಗರದ ರೈಲ್ವೇ ಯೋಜನೆಯನ್ನು ಅನುಷ್ಠಾನಗೊಳಿಸುವ ಉಸ್ತುವಾರಿ ಹೊತ್ತಿರುವ ಎಂಆರ್‌ವಿಸಿಯನ್ನು ತರಾಟೆಗೆ ಎತ್ತಿಕೊಂಡ ಗೋಯಲ್, ಮುಂಬೈಯ ಸಿಎಸ್‌ಟಿಯಿಂದ ಪನ್ವೇಲ್‌ವರೆಗೆ ಹಾಗೂ ಬಾಂದ್ರದಿಂದ ವಿರಾರ್‌ವರೆಗಿನ ಮಹತ್ವಾಕಾಂಕ್ಷೆಯ ರೈಲ್ವೇ ಮಾರ್ಗವನ್ನು ಎತ್ತರಗೊಳಿಸುವ ಯೋಜನೆಯ ಅಂದಾಜುವೆಚ್ಚವನ್ನು ಪರಿಷ್ಕರಿಸುವಂತೆ ಸೂಚಿಸಿದರು.
ಎಂಆರ್‌ವಿಸಿ ಸಲ್ಲಿಸಿದ್ದ ಅಂದಾಜುವೆಚ್ಚದ ಬಗ್ಗೆ ತೀವ್ರ ಅಸಮಾಧಾನಗೊಂಡ ಗೋಯಲ್, ರೈಲ್ವೇ ಮಾರ್ಗ ಎತ್ತರಗೊಳಿಸುವ ಅಂದಾಜುವೆಚ್ಚ ಬುಲೆಟ್ ಟ್ರೈನ್‌ಗಿಂತಲೂ ಅಧಿಕ ಎಂದಾದರೆ, ಈ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ಅಗಾಧತೆ ನನ್ನನ್ನು ಉಸಿರುಕಟ್ಟುವಂತೆ ಮಾಡಿದೆ ಎಂದು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿರುವುದಾಗಿ ಸಭೆಯಲ್ಲಿ ಪಾಲ್ಗೊಂಡ ಕೆಲವರು ತಿಳಿಸಿದ್ದಾರೆ.
ಬುಲೆಟ್ ಟ್ರೈನ್ ಹಳಿಯ ವೆಚ್ಚ ಪ್ರತೀ ಕಿ.ಮೀ.ಗೆ ಸುಮಾರು 81 ಕೋಟಿ ರೂ. ಎಂದು ಅಂದಾಜಿಸಲಾಗಿದ್ದರೆ, ಬಾಂದ್ರಾದಿಂದ ವಿರಾರ್‌ವರೆಗಿನ ಹಾಗೂ ಸಿಎಸ್‌ಎಂಟಿಯಿಂದ ಕಲ್ಯಾಣ್‌ವರೆಗಿನ ರೈಲು ಹಳಿ ಎತ್ತರಿಸುವ ಯೋಜನೆಯ ವೆಚ್ಚ ತಲಾ ಸುಮಾರು 200 ಕೋಟಿ ರೂ. ಆಗಿರುತ್ತದೆ. (ಬಾಂದ್ರಾ- ವಿರಾರ್ ಹಳಿ ಎತ್ತರಿಸುವ ಯೋಜನೆಯ ವೆಚ್ಚ 16,368 ಕೋಟಿ ರೂ, ಸಿಎಸ್‌ಎಂಟಿ-ಪನ್ವೇಲ್ ಹಳಿ ಎತ್ತರಿಸುವ ಯೋಜನೆಯ ವೆಚ್ಚ 12,168 ಕೋಟಿ ರೂ.). ಅಂದರೆ 50 ಕಿ.ಮೀ. ಉದ್ದದ ರೈಲ್ವೇ ಹಳಿಯನ್ನು ಎತ್ತರಿಸುವ ಯೋಜನೆಯ ವೆಚ್ಚ ಬುಲೆಟ್ ಟ್ರೈನ್ ಯೋಜನೆಯ ವೆಚ್ಚವನ್ನೂ ಮೀರಿಸುತ್ತದೆಯೇ ಎಂದು ಗೋಯಲ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಎತ್ತರಗೊಳಿಸಿದ ರೈಲ್ವೇ ಹಳಿ ಯೋಜನೆಗೆ ಅಗತ್ಯವಿರುವ ಆಧುನಿಕ ಬೋಗಿಗೆ ತಲಾ 5 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಹೇಳಿದಾಗ, ಇಷ್ಟು ಮೊತ್ತ ಬೇಕು ಎಂದು ನೀವು ಹೇಳುವಿರಾದರೆ, ಬಹುಷಃ ಭ್ರಷ್ಟಾಚಾರದ ಮಟ್ಟವೂ ಬೃಹತ್ ಪ್ರಮಾಣದಲ್ಲಿರಬೇಕು ಹಾಗೂ ಯೋಜನೆಯಲ್ಲಿ ಪಾರದರ್ಶಕೆಯ ಕೊರತೆಯನ್ನು ಇದು ಬಿಂಬಿಸುತ್ತದೆ ಎಂದು ಸಚಿವರು ತಿಳಿಸಿದರು.
ಬಳಿಕ , ಎರಡೂ ಯೋಜನೆಗಳ ಅಂದಾಜು ವೆಚ್ಚವನ್ನು ಪರಿಷ್ಕರಿಸುಂತೆ ಹಾಗೂ ಪರಿಷ್ಕೃತ ಯೋಜನೆಯ ವಿವರವನ್ನು ಶೀಘ್ರ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಮೆಟ್ರೋ ಕಾರಿಡಾರ್ ನಿರ್ಮಾಣದ ಅಂದಾಜುವೆಚ್ಚದ ಬಗ್ಗೆ ‘ಮುಂಬೈ ಮೆಟ್ರೊಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ’ (ಎಂಎಂಆರ್‌ಡಿಎ) ಅಧಿಕಾರಿಗಳಿಂದ ವಿವರ ಪಡೆದ ಸಚಿವರು, ಈ ಬಗ್ಗೆಯೂ ತೀವ್ರ ಅಸಮಾಧಾನ ಸೂಚಿಸಿದರು. ಈ ಅಂದಾಜುವೆಚ್ಚವೂ ಬುಲೆಟ್ ಟ್ರೈನ್ ಯೋಜನೆಯ ವೆಚ್ಚಕ್ಕಿಂತ ಅಧಿಕವಾಗಿರುವ ಬಗ್ಗೆ ಸಚಿವರು ಅಸಮಾಧಾನ ಸೂಚಿಸಿದಾಗ, ಮೆಟ್ರೋ ಯೋಜನೆಯಲ್ಲಿ ರೈಲು ನಿಲ್ದಾಣಗಳ ಸಂಖ್ಯೆ ಅಧಿಕವಾಗಿದ್ದರೆ ಬುಲೆಟ್ ಟ್ರೈನ್ ಯೋಜನೆಯಲ್ಲಿ ರೈಲು ನಿಲ್ದಾಣ ಕಡಿಮೆಯಿರುತ್ತದೆ. ಇದೇ ವ್ಯತ್ಯಾಸ ಎಂದು ಅಧಿಕಾರಿಗಳು ವಿವರಿಸಿದರು ಎಂದು ಮೂಲಗಳು ತಿಳಿಸಿವೆ.
ಮೆಟ್ರೋ ರೈಲಿನ ವೆಚ್ಚ ಯಾವಾಗಲೂ ಹೈ-ಸ್ಪೀಡ್ ರೈಲಿಗಿಂತ ಅಧಿಕವಾಗಿರುತ್ತದೆ. ನಾವು ಸಲ್ಲಿಸಿದ ಮೆಟ್ರೋ ಯೋಜನೆಯ ಅಂದಾಜುವೆಚ್ಚ ಇನ್ನಿತರ ನಗರಗಳಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಯ ವೆಚ್ಚಕ್ಕಿಂತ ಅಧಿಕವಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು ಎಂದು ಮೂಲಗಳು ತಿಳಿಸಿವೆ.







