ನಟ ಪ್ರಕಾಶ್ ರೈ ಪರನಿಂತ ಡಿವೈಎಫ್‌ಐಯಿಂದ ಪ್ರತಿಭಟನೆ

ಬೆಂಗಳೂರು,ಅ. 3: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಪ್ರಶ್ನಿಸಿದ್ದ ಚಿತ್ರನಟ ಪ್ರಕಾಶ್ ರೈ ಅವರ ವಿರುದ್ಧ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸಿರುವ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ನಡೆಯನ್ನು ಖಂಡಿಸಿ ಡಿವೈಎಫ್‌ಐ ಸಂಘಟನೆ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಪ್ರಧಾನಿ ಹುದ್ದೆಯಲ್ಲಿರುವವರನ್ನು ಸಾರ್ವಜನಿಕರು ಪ್ರಶ್ನಿಸಬಾರದು ಎಂದು ಸಂವಿಧಾನದಲ್ಲಿ ನಿಷೇಧ ಹೇರಿಲ್ಲ. ಆದರೆ ಸಂಘಪರಿವಾರ, ಬಿಜೆಪಿ ಪ್ರಶ್ನೆ ಎತ್ತುವ ಧ್ವನಿಯನ್ನು ಅಡಗಿಸುವ ಕುತಂತ್ರವಿದು ಎಂದು ಕಿಡಿಕಾರಿದರು.
ಪ್ರಕಾಶ್ ರೈ ಸಮಾಜಮುಖಿ ಕಲಾವಿದ. ಇದೇ ಕಾರಣದಿಂದಲೇ ಅವರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು. ಡಿವೈಎಫ್‌ಐ ರಾಜ್ಯ ಸಮ್ಮೆಳನ ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ನಡೆಯ ಕುರಿತು ನಟ ಪ್ರಕಾಶ್ ರೈ ಎತ್ತಿರುವ ಪ್ರಶ್ನೆಗಳಿಗೆ ನಮ್ಮ ಸಮ್ಮತಿಯೂ ಇದೆ. ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ನಟ ಪ್ರಕಾಶ್ ರೈ ಪ್ರಧಾನಿಯವರನ್ನು ಪ್ರಶ್ನಿಸಿರುವುದರಲ್ಲಿ ತಪ್ಪಿಲ್ಲ. ಆದರೆ ಆರೆಸ್ಸೆಸ್ ಮತ್ತ ಬಿಜೆಪಿ ಮುಖಂಡರು ಅತ್ಯಂತ ಹೀನವಾಗಿ ನಟ ಪ್ರಕಾಶ್ ರೈ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರಕಾಶ್ ರೈ ಅವರನ್ನು ಟೀಕೆ ಮಾಡುವ ಭರದಲ್ಲಿ ಅವರ ವೈಯಕ್ತಿಕ ಜೀವನ ಕುರಿತು ತೇಜೋವಧೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಟ ಪ್ರಕಾಶ್ ರೈ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ವಿರುದ್ಧ ಎತ್ತಿರುವ ಪ್ರಶ್ನೆಗಳ ಕುರಿತು ಗೊಂದಲಗಳಿದ್ದರೆ ಬಿಜೆಪಿಯವರು ಬಹಿರಂಗ ಸಭೆಗೆ ಬರಲಿ ಎಂದು ಆಹ್ವಾನ ನೀಡಿದರು.
ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮಾತನಾಡಿ, ಬಿಜೆಪಿಯ ಸಂಸದ ಪ್ರತಾಪ್ ಸಿಂಹ ನಟ ಪ್ರಕಾಶ್ ರೈ ಬಗ್ಗೆ ಟೀಕೆ ಮಾಡುವಾಗ ಮನಬಂದಂತೆ ಮಾತನಾಡಿದ್ದಾರೆ. ದೇಶದಲ್ಲಿ ಹತ್ಯೆ, ಸಾವಿನಲ್ಲಿ ಸಂಭ್ರಮಿಸುವವರು ಇದ್ದಾರೆ. ಪ್ರಕಾಶ್ ರೈ ಅವರು ಪತ್ರಕರ್ತೆ ಗೌರಿ ಹತ್ಯೆಯ ಕುರಿತು ಪ್ರಧಾನಿ ಮೋದಿಯ ಮೌನ ನಡೆಯನ್ನು ಪ್ರಶ್ನಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಟೀಕೆಯ ಭರದಲ್ಲಿ ಪ್ರತಾಪ್ ಸಿಂಹ ತನ್ನ ಎಲುಬಿಲ್ಲದ ನಾಲಗೆಯನ್ನು ಹರಿಯಬಿಟ್ಟಿದ್ದಾರೆ. ಪ್ರತಾಪ್ ಅವರಿಗೆ ಸಂಸದರು ಎಂದು ಕರೆದುಕೊಳ್ಳಲು ಯಾವುದೇ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ಬಿಜೆಪಿ ಪಕ್ಷದವರು ಪ್ರಯತ್ನಿಸುತ್ತಿದ್ದಾರೆ. ಪ್ರತಾಪ್ ಸಿಂಹ ವೈಯಕ್ತಿಕ ವಿಷಯಗಳನ್ನು ಮುಂಡಿಟ್ಟುಕೊಂಡು ಈ ರೀತಿ ಟೀಕೆ ಮಾಡುವುದು ಸರಿಯಲ್ಲ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐನ ರಾಷ್ಟ್ರೀಯ ಉಪಾಧ್ಯಕ್ಷೆ ಪ್ರೀತಿ ಶೇಖರ್, ಜಿ.ಎನ್.ನಾಗರಾಜ್, ಗುರುರಾಜ್ ಸೇರಿದಂತೆ ಇತರರು ಇದ್ದರು.







