ನ್ಯಾ.ಜಯಂತ್ ಪಟೇಲ್ ವರ್ಗಾವಣೆ ವಿರೋಧಿಸಿ ಅ.4ರಂದು ಕೋರ್ಟ್ ಕಲಾಪ ಬಹಿಷ್ಕಾರ

ಬೆಂಗಳೂರು, ಅ.3: ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವ ಸುಪ್ರೀಂಕೋರ್ಟ್ ಕೊಲಿಜಿಯಂನ ಕ್ರಮ ಖಂಡಿಸಿ ಅ.4ರಂದು ರಾಜ್ಯಾದ್ಯಂತ ನ್ಯಾಯಾಲಯ ಕಲಾಪ ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘ ನಿರ್ಧರಿಸಿದೆ.
ಹೈಕೋರ್ಟ್ ನ್ಯಾಯಾಲಯದಲ್ಲಿ ಜಯಂತ್ ಪಟೇಲ್ ಅವರು ಉತ್ತಮ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಹೈಕೋರ್ಟ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕಾಗಿತ್ತು. ಆದರೆ, ಸುಪ್ರೀಂಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್ ನ್ಯಾಯಾಲಯದ ಮೂರನೆ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವ ಮೂಲಕ ಅವರಿಗೆ ಹಿಂಭಡ್ತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಕುರಿತಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಮಲತಾಯಿ ಧೋರಣೆ ಅನುಸರಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಂ ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್‌ನ ಈ ತೀರ್ಮಾನ ಖಂಡನೀಯ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಪ್ರಾಮಾಣಿಕ ನ್ಯಾಯಮೂರ್ತಿಯಾದ ಜಯಂತ್ ಪಟೇಲ್ ಅವರಿಗೆ ಈ ಸಂಬಂಧ ನ್ಯಾಯ ದೊರಕಿಲ್ಲ. ಅಲ್ಲದೆ, ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ವಕೀಲರು ಅ.4ರಂದು ಕಲಾಪ ಬಹಿಷ್ಕರಿಸಿ ಸುಪ್ರೀಂ ತೀರ್ಮಾನವನ್ನು ಖಂಡಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಹೈಕೋರ್ಟ್‌ನಲ್ಲಿ ಒಟ್ಟು 62 ನ್ಯಾಯಮೂರ್ತಿಗಳ ಅವಶ್ಯಕತೆ ಇದ್ದು, ಪ್ರಸ್ತುತ 25 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ, ಸಾಕಷ್ಟು ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ ಎಂದ ಅವರು, ರಾಜ್ಯ ಹೈಕೋರ್ಟ್ ಕುರಿತಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಭೇದ-ಭಾವ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಹೈಕೋರ್ಟ್ ನ್ಯಾಯಾಲಯದಲ್ಲಿ ಖಾಲಿ ಇರುವ ಎಲ್ಲ ನ್ಯಾಯಮೂರ್ತಿಗಳ ಹುದ್ದೆಯನ್ನು ಭರ್ತಿ ಮಾಡಬೇಕು. ಹಾಗೂ ಕಳಂಕಿತ ನ್ಯಾಯಮೂರ್ತಿಗಳ ಮೇಲೆ ತೀವ್ರ ನಿಗಾ ಇರಿಸಬೇಕು ಎಂದು ಅವರು ಒತ್ತಾಯಿಸಿದರು.
ಕಲಾಪದಿಂದ ಹೊರಗುಳಿದ ವಕೀಲರು: ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾ.ಪಿ.ಎಸ್.ದಿನೇಶ್‌ಕುಮಾರ್ ಅವರ ವಿಭಾಗೀಯ ಪೀಠ ಕಲಾದಿಂದ ವಕೀಲರು ಹೊರಗುಳಿದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ, ಖಜಾಂಚಿ ಪ್ರವೀಣ್‌ಗೌಡ ಉಪಸ್ಥಿತರಿದ್ದರು.
ಭ್ರಷ್ಟರ ಸಂಖ್ಯೆ ನ್ಯಾಯಾಂಗದಲ್ಲಿ ಜಾಸ್ತಿ ಆಗುತ್ತಿರುವ ಕಾರಣ ಜಯಂತ್ ಪಟೇಲ್ ಅವರಂಥವರ ಪ್ರಕರಣ ಹೆಚ್ಚುತ್ತಿವೆ. ಇದನ್ನು ತಡೆಯುವ ಉದ್ದೇಶದಿಂದ ಅ.4ರಂದು ರಾಜ್ಯಾದ್ಯಂತ ವಕೀಲರು ಕೋರ್ಟ್ ಕಲಾಪಗಳಿಂದ ಹೊರಗುಳಿಯಲಿದ್ದಾರೆ. ಮುಖರ್ಜಿ ಅವರು ಇದೇ 9ರಂದು ನಿವೃತ್ತರಾಗುತ್ತಿದ್ದಾರೆ. ಆದಕಾರಣ ಅವರು ಯಾವುದೇ ಮುಖ್ಯ ಪ್ರಕರಣಗಳ ವಿಚಾರಣೆ ನಡೆಸಬಾರದು. ಇಷ್ಟರೊಳಗೆ ಒಂದು ವೇಳೆ ಅವರೇನಾದರೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದನ್ನೋತಿ ಮಾಡಿದ್ದೇ ಆದರೆ ರಾಜ್ಯ ವಕೀಲರ ಪರಿಷತ್ ವತಿಯಿಂದ ಸುಪ್ರೀಂ ಕೋರ್ಟ್ ಮುಂದೆ ಧರಣಿ ಕೂರಲಾಗುವುದು.
-ವೈ.ಆರ್.ಸದಾಶಿವರೆಡ್ಡಿ, ರಾಜ್ಯ ವಕೀಲರ ಪರಿಷತ್ ಸಹ ಕಾರ್ಯಾಧ್ಯಕ್ಷ







