ವಿವಿಗಳಲ್ಲಿ ಪ್ರಾಚೀನ ಕನ್ನಡ ಕಾವ್ಯಗಳ ಗಮಕ ವಾಚಿಸಲಿ: ಸಿದ್ದಲಿಂಗಯ್ಯ
‘ಮಹಾಕವಿ ಪಂಪ-ನೆನ್ನೆ-ಇಂದು-ನಾಳೆ’ ವಿಚಾರ ಸಂಕಿರಣ

ಬೆಂಗಳೂರು, ಅ.3: ವಿಶ್ವವಿದ್ಯಾನಿಲಯಗಳ ಕನ್ನಡ ತರಗತಿಗಳಲ್ಲಾದರು ಪ್ರಾಚೀನ ಕನ್ನಡ ಕಾವ್ಯಗಳನ್ನು ಗಮಕದಲ್ಲಿ ವಾಚಿಸಿ, ವ್ಯಾಖ್ಯಾನಗಳನ್ನು ನೀಡಲು ಪ್ರಾಧ್ಯಾಪಕರು ಮುಂದಾಗಲಿ ಎಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಆಶಿಸಿದ್ದಾರೆ.
ಮಂಗಳವಾರ ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯಗಳ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಮಹಾಕವಿ ಪಂಪ-ನೆನ್ನೆ-ಇಂದು-ನಾಳೆ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚೀನ ಕಾವ್ಯಗಳು ನಮ್ಮ ಸಂಪತ್ತು. ಅವುಗಳ ಕುರಿತು ಉದಾಸೀನ ತೋರಿದರೆ ಕನ್ನಡ ಸಾಹಿತ್ಯಕ್ಕೆ ಅಪಾರ ನಷ್ಟವೇ ಸರಿ. ಪಂಪನ ‘ಆದಿಪುರಾಣ, ‘ವಿಕ್ರಮಾರ್ಜುನ ವಿಜಯ’, ಲಕ್ಷ್ಮೀಶನ ‘ಜೈಮಿನಿ ಭಾರತ’, ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ಗಳಲ್ಲಿರುವ ರುಚಿಯನ್ನು ಈಗಿನ ವಿದ್ಯಾರ್ಥಿಗಳಿಗೆ ಹತ್ತಿಸದಿರುವುದು ವಿಶ್ವವಿದ್ಯಾನಿಲಯಗಳ ದೊಡ್ಡ ಲೋಪವೆಂದು ಅವರು ವಿಷಾದಿಸಿದರು.
ಪ್ರಸಿದ್ಧ ಗಾಯಕ ಪಿ.ಕಾಳಿಂಗರಾವ್ ಹಾಡಿರುವ ಹರಿಹರನ ರಗಳೆಗಳನ್ನು ಕಿ.ರಂ.ನಾಗರಾಜ್ ನಮಗೆ ಕೇಳಿಸುತ್ತಿದ್ದರು. ತದನಂತರ ಅವುಗಳ ವ್ಯಾಖ್ಯಾನಗಳನ್ನು ಮನಸಿಗೆ ಮುಟ್ಟುವಂತೆ ಹೇಳುತ್ತಿದ್ದರು. ಇಂತಹ ಪಾಠಗಳನ್ನು ಕೇಳಿದ ನಾವೇ ಧನ್ಯರು. ಅಂತಹ ಅವಕಾಶವನ್ನು ಇಂದಿನ ವಿದ್ಯಾರ್ಥಿಗಳಿಗೂ ಕಲ್ಪಿಸುವ ಮೂಲಕ ಪ್ರಾಚೀನ ಕನ್ನಡ ಕಾವ್ಯಗಳ ಸಂಪತ್ತಿನ ಜ್ಞಾನವನ್ನು ಪಡೆಯುವಂತಾಗಲಿ ಎಂದು ಅವರು ಆಶಿಸಿದರು.
ಮನುಷ್ಯ ಜಾತಿ ತಾನೊಂದೇ ವಲಂ: ಆದಿ ಕವಿ ಪಂಪನ ಚಿಂತನೆಗಳಿಂದ ರಾಜ್ಯದಲ್ಲಿ ಪ್ರಗತಿಪರ ಚಿಂತನೆಗಳ ಬೇರುಗಳು ಇಂದಿಗೂ ಭದ್ರವಾಗಿವೆ. ಸುಮಾರು 10ನೆ ಶತಮಾನದಲ್ಲಿಯೇ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಚಿಂತನೆಯನ್ನು ಜಗತ್ತಿಗೆ ನೀಡುವ ಮೂಲಕ ಜಾತಿ, ಧರ್ಮ, ವರ್ಣ ಹಾಗೂ ವರ್ಗಗಳ ಚೌಕಟ್ಟುಗಳನ್ನು ನುಚ್ಚು ನೂರು ಮಾಡಿದ್ದಾನೆ. ಇಂತಹ ಕವಿಯೊಬ್ಬನ ನಾಡಿನಲ್ಲಿ ಹುಟ್ಟಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿದ್ರಾವಸ್ಥೆಯಿಂದ ಮೇಲೇಳೋಣ: ಕನ್ನಡ ನಾಡಿನ ಪ್ರಾಚೀನ ರಾಜರು ತಮ್ಮ ಆಳ್ವಿಕೆಯನ್ನು ನೇಪಾಳ ಕಠ್ಮಂಡುವರೆಗೂ ಹಬ್ಬಿತ್ತು. ಆದರೆ, ಇಂದು ರಾಜ್ಯದ ಜನತೆ ಕೆಲಸಕ್ಕಾಗಿ ಅನ್ಯ ರಾಜ್ಯಗಳಿಗೆ ಹೋಗಲು ಹಿಂಜರಿಯುತ್ತಾರೆ. ಇಂತಹ ಮೊಂಡುತನ, ಉದಾಸೀನತೆಯ ಮನಸ್ಥಿತಿಗಳಿಂದ ಕನ್ನಡಿಗರು ಹೊರ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕಮಲಾ ಹಂಪನ, ಡಾ.ಬಿ.ಗಂಗಾಧರ್, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಕಸಾಪ ಜಿಲ್ಲಾ ಅಧ್ಯಕ್ಷ ಮಾಯಣ್ಣ, ಕನ್ನಡ ಅಧ್ಯಯನ ಕೇಂದ್ರದ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಮತ್ತಿರರಿದ್ದರು.
ಜಾಗತೀಕರಣ ಹಾಗೂ ಆಧುನಿಕ ಯುಗದಲ್ಲಿರುವ ಕನ್ನಡ ನಾಡಿನಲ್ಲಿ ಜಾತಿ ಬಡಾವಣೆಗಳು ನಿರ್ಮಾಣವಾಗುತ್ತಿರುವುದು ಆತಂಕ ಮೂಡಿಸಿದೆ. ವಿದ್ಯಾವಂತರಲ್ಲಿಯೇ ಜಾತಿಯ ಹಿರಿಮೆ ಹೆಚ್ಚಾಗುತ್ತಿದ್ದು, ಕೂಡಿ ಬಾಳುವಂತಹ ವ್ಯವಸ್ಥೆಗೆ ಅಪಾಯ ತಂದಿಟ್ಟಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹೊಸದಾಗಿ ನಿರ್ಮಾಣವಾಗುವ ಬಡಾವಣೆಗಳಲ್ಲಿ ಎಲ್ಲ ಜಾತಿಗಳು ಅಲ್ಲಿ ನೆಲೆಸುವುದಕ್ಕೆ ಆದ್ಯತೆ ಕೊಡುತ್ತಿದ್ದರು. ಆದರೆ, ಈಗ ಅದು ಇಲ್ಲವಾಗಿದೆ. ಈ ಬಗ್ಗೆ ಪ್ರಜ್ಞಾವಂತರು ಹೆಚ್ಚಿನ ಗಮನ ಕೊಟ್ಟು, ಜಾತಿ ಮನಸುಗಳಲ್ಲಿ ವಿಶ್ವಮಾನವನ ಕನಸಿನ ಬೀಜ ಬಿತ್ತಬೇಕಿದೆ.
-ಸಿದ್ದಲಿಂಗಯ್ಯ, ಹಿರಿಯ ಕವಿ







