ಅ.6ಕ್ಕೆ ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಆಗ್ರಹಿಸಿ ದಸಂಸದಿಂದ ರಾಜ್ಯಾದ್ಯಂತ ಧರಣಿ
ಬೆಂಗಳೂರು, ಅ.3: ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ ಹಂತಕರನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅ.6 ರಂದು ರಾಜ್ಯಾದ್ಯಂತ ಧರಣಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಡಾ.ಎನ್.ಮೂರ್ತಿ, ಗೌರಿ ಲಂಕೇಶ್‌ರ ವಿಚಾರಗಳನ್ನು ಸಹಿಸದ ಮನುವಾದಿಗಳು ಅವರನ್ನು ಕೊಲೆ ಮಾಡಿ ಅ.5 ಕ್ಕೆ ಒಂದು ತಿಂಗಳು ಕಳೆಯಲಿದೆ. ಆದರೆ, ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ದಳ(ಎಸ್‌ಐಟಿ) ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಕಳೆದ ಎರಡು ವರ್ಷಗಳ ಹಿಂದೆ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಕೊಲೆ ನಡೆಯಿತು, ಅನಂತರ ವಿಚಾರವಾದಿಗಳಾದ ದಾಭೋಲ್ಕರ್, ಪನ್ಸಾರೆಯನ್ನು ಹತ್ಯೆ ಮಾಡಿದರು. ಈಗ ಗೌರಿ ಲಂಕೇಶ್ ರನ್ನು ಕೊಲೆ ಮಾಡುವ ಮೂಲಕ ಸತ್ಯ ಮಾತನಾಡುವವರ ಬಾಯಿ ಮುಚ್ಚಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಸಂಘಪರಿವಾರದ ವ್ಯಕ್ತಿ ಹತ್ಯೆ ನಡೆದರೆ ಖಂಡಿಸುವ ಪ್ರಧಾನಿ ನರೇಂದ್ರಮೋದಿ ಗೌರಿ ಲಂಕೇಶ್, ಕಲಬುರ್ಗಿ, ಪನ್ಸಾರೆಯನ್ನು ಹತ್ಯೆಗಳು ನಡೆದಿವೆ. ಆದರೆ, ಇದುವರೆಗೂ ಮೋದಿ ಈ ಕುರಿತು ಮಾತನಾಡಿಲ್ಲ ಎಂದ ಅವರು, ಕೇಂದ್ರ ಸರಕಾರ ಹತ್ಯೆ ನಡೆಸಿದವರನ್ನು ಶೀಘ್ರ ಬಂಧಿಸುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಅಂಗವಾಗಿ ಅ.6 ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ರ್ಯಾಲಿ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಹಂತಕರನ್ನು ಶೀಘ್ರ ಬಂಧಿಸಬೇಕು, ವಿಚಾರವಾದಿಗಳ ಹತ್ಯೆ ಹಿಂದಿರುವವರನ್ನು ಕೊಲೆಗಾರರನ್ನು ಬಂಧಿಸಿ ಶಿಕ್ಷಿಸಬೇಕು. ಪ್ರಗತಿಪರ, ವಿಚಾರವಾದಿಗಳ ಹತ್ಯೆ ತಡೆಯಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಹಾಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದರು.







