ಗೌರಿ ಹತ್ಯೆ ಕುರಿತು ಸಿನೆಮಾ ನಿರ್ಮಾಣ: ಕರ್ನಾಟಕ ಚಲನಚಿತ್ರ ಮಂಡಳಿಗೆ ನೋಟಿಸ್ ಜಾರಿ

ಬೆಂಗಳೂರು, ಅ.3: ಪತ್ರಕರ್ತೆ ಗೌರಿ ಲಂಕೇಶ್ ಕುರಿತು ಇಲ್ಲವೇ ಗೌರಿ ಹತ್ಯೆ ಪ್ರಕರಣ ಕುರಿತಂತೆ ಯಾವುದೇ ಚಿತ್ರ ನಿರ್ಮಾಣ ಮಾಡದಂತೆ ನೋಟಿಸ್ ಜಾರಿ ಮಾಡಲಾಗಿದೆ.
ಚಿತ್ರ ನಿರ್ಮಾಪಕ ಎ.ಎಂ.ಆರ್.ರಮೇಶ್ ಎಂಬವರು ಪತ್ರಿಕಾ ಹೇಳಿಕೆ ನೀಡಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಿಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದಿರಾ ಲಂಕೇಶ್ ಅವರು ಕರ್ನಾಟಕ ಚಲನಚಿತ್ರ ಮಂಡಳಿ ಹಾಗೂ ರಮೇಶ್ ಅವರಿಗೆ ನೋಟಿಸ್ ಜಾರಿ ಮಾಡಿದ್ಧಾರೆ.
ಗೌರಿ ಲಂಕೇಶ್ ಕುರಿತು ಇಲ್ಲವೇ ಅವರ ಹತ್ಯೆ ಅಥವಾ ಗೌರಿ ಜೀವನಕ್ಕೆ ಸಂಬಂಧಿಸಿದಂತೆ ಚಿತ್ರ ಮಾಡಕೂಡದು. ಗೌರಿ ವಿಷಯವು ಸಂವೇದನಾತ್ಮಕವಾಗಿದೆ. ನಮ್ಮ ಕುಟುಂಬವು ಮಾನಸಿಕ ಜರ್ಝರಿತಗೊಂಡಿರುವ ಈ ಸಂದರ್ಭದಲ್ಲಿ ಸಿನಿಮಾ ತೆಗೆಯುವ ಮೂಲಕ ಲಾಭ ಹವಣಿಕೆಗೆ ಮುಂದಾಗಲಾಗಿದೆ. ಇದು ಅತ್ಯಂತ ಬೇಸರದ ಸಂಗತಿ. ಅಲ್ಲದೇ ಗೌರಿ ವಿಷಯ ಹಾಗೂ ಗೌರಿ ನಡೆಸುತ್ತಿದ್ದ ಪತ್ರಿಕೆ ವಿಷಯವು ನಮ್ಮ ಕುಟುಂಬದ ಮಿತಿಗೆ ಒಳಪಟ್ಟಿದ್ದು, ಯಾರೊಬ್ಬರ ಪ್ರವೇಶಕ್ಕೆ ಅವಕಾಶವಿಲ್ಲ. ಹಾಗೊಂದು ವೇಳೆ ಸಿನೆಮಾ ತೆಗೆದಿದ್ದೇ ಆದಲ್ಲಿ ಹತ್ತು ಕೋಟಿ ರೂ. ಮಾನನಷ್ಟ ಪರಿಹಾರದ ರೂಪದಲ್ಲಿ ತೆರಬೇಕಾಗುತ್ತದೆ ಎಂದು ಗೌರಿ ಅವರ ತಾಯಿ ಇಂದಿರಾ ಲಂಕೇಶ್ ಪರವಾಗಿ ಹಿರಿಯ ವಕೀಲ ಶಂಕರಪ್ಪನೋಟಿಸ್‌ನಲ್ಲಿ ತಿಳಿಸಿದ್ದಾರೆ.





