ವಾಹನ ನಿಲುಗಡೆ ತೆರವುಗೊಳಿಸಲು ಸಚಿವ ಕೆ.ಜೆ.ಜಾರ್ಜ್ ಆದೇಶ
ಬೆಂಗಳೂರು, ಅ. 3: ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಗಳು ತೆರಳುವ ಮಾರ್ಗದಲ್ಲಿನ ವಾಹನ ನಿಲುಗಡೆ ತೆರವುಗೊಳಿಸಲು ಸಂಚಾರ ಪೊಲೀಸರಿಗೆ ಆದೇಶ ನೀಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ಬಿಬಿಎಂಪಿ ಮೇಯರ್, ಉಪ ಮೇಯರ್, ಸ್ಥಳೀಯ ಶಾಸಕ ಹಾಗೂ ಪಾಲಿಕೆ ಸದಸ್ಯರೊಂದಿಗೆ ಬಸವನಗುಡಿ ಕ್ಷೇತ್ರದಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯ ನಾಗರಿಕರು ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಬಸ್ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಗಳು ಬರುತ್ತಿಲ್ಲ ಎಂದು ದೂರು ಸಲ್ಲಿಸಿದರು.
ಇದಕ್ಕೆ ತಕ್ಷಣವೇ ಸ್ಪಂದಿಸಿದ ಕೆ.ಜೆ.ಜಾರ್ಜ್, ಬಿಎಂಟಿಸಿ ಬಸ್ ಗಳು ತೆರಳಲು ಮಾರ್ಗ ಮಧ್ಯೆ ಇರುವ ವಾಹನಗಳ ನಿಲುಗಡೆ ಕಡ್ಡಾಯವಾಗಿ ತೆರವುಗೊಳಿಸುವಂತೆ ಸಂಚಾರಿ ಪೋಲಿಸರಿಗೆ ಆದೇಶಸಿದರು. ಸದರಿ ಬಸ್ಸ್ ನಿಲ್ದಾಣದ ಹತ್ತಿರವಿರುವ ಶೌಚಾಲಯವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸ್ವಚ್ಛವಾಗಿಡಲು ಅಧಿಕಾರಿಗಳಿಗೆ ಸೂಚಿಸಿದರು.
ಕರಿತಿಮ್ಮನಹಳ್ಳಿ ಉದ್ಯಾನವನಕ್ಕೆ ಭೇಟಿ ನೀಡಿ ಬೃಹತ್ ನೀರುಗಾಲುವೆಯು ಉತ್ತಮ ಸ್ಥಿತಿಯಲ್ಲಿರದ ಕಾರಣ ಇಲ್ಲಿನ ಕಟ್ಟಡಗಳು ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ನೀರುಗಾಲುವೆಯ ಹೂಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಜಾರ್ಜ್ ಇದೇ ವೇಳೆ ಆದೇಶಿಸಿದರು.
ಕುಡಿಯುವ ನೀರು ಸರಬರಾಜಿನ ಕೊಳವೆಗಳು ಹಾಗೂ ನೀರು ಸರಬರಾಜು ಸರಿಯಾಗಿ ಸಮರ್ಪಕವಾಗಿ ಸಾರ್ವಜನಿಕರಿಗೆ ಲಭ್ಯವಾಗದಿರುವುದರಿಂದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕೊಳವೆಗಳನ್ನು ಸರಿಪಡಿಸಿ ಹಳೆಯ ಪೈಪ್‌ಲೈನ್‌ನ್ನು ತೆರವುಗೊಳಿಸಿ ಹೊಸ ಪೈಪ್‌ಗಳನ್ನು ಅಳಡಿಸಲು ಆದೇಶಿಸಿದರು.
ಅನಂತರ ಬೃಂದಾವನನಗರ, ನೇಕಾರರ ಕಾಲನಿ ಹಾಗೂ ಸುತ್ತಮುತ್ತಲಿನ ನಗರದ ರಸ್ತೆ ತುಂಬ ಹಾಳಾಗಿದ್ದು, ಆದಷ್ಟು ಬೇಗ ರಸ್ತೆಗಳಿಗೆ ಡಾಂಬರೀಕರಣ ಮಾಡಲು ಸೂಚಿಸಿದರು. ಗಿರಿನಗರದ 4ನೆ ಬಡಾವಣೆಗೆ ಭೇಟಿ ನೀಡಿ ಬಿಡಿಎಯಿಂದ ಪಾಲಿಕೆಗೆ ವರ್ಗಾವಣೆ ಆಗದೆ ಇರುವುದರಿಂದ ಸದರಿ ಬಡಾವಣೆಯು ಅಭಿವೃದ್ಧಿ ಸರಿಯಾಗಿ ಹೊಂದಿರುವುದಿಲ್ಲ.
ಆದುದರಿಂದ ಈ ಕೂಡಲೇ ಬಡಾವಣೆಯನ್ನು ಪಾಲಿಕೆಯ ಸುಪರ್ದಿಗೆ ಪಡೆದು ಅಭಿವೃದ್ಧಿ ಪಡಿಸಲು ಆದೇಶಿಸಿದರು. ಈ ಎಲ್ಲ ಅಭಿವೃದ್ಧಿ ಕಾರ್ಯವನ್ನು ಅಭಿವೃದ್ಧಿಪಡಿಸಲಿಕ್ಕೆ 10 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವುದು ಎಂದು ಅವರು ತಿಳಿಸಿದರು.







