ಜನತೆಯ ಅನುಭವದ ಅಕ್ಷರ ರೂಪವೇ ದೇಶಿ ಸಾಹಿತ್ಯ: ಡಾ.ಚಂದ್ರಶೇಖರ ನಂಗಲಿ
ಬೆಂಗಳೂರು, ಅ.3: ಜನತೆಯ ಅನುಭವಗಳೇ ದೇಶಿಯತೆಯಾಗಿದ್ದು, ಅದನ್ನು ಅಕ್ಷರ ರೂಪಕ್ಕಿಳಿಸುವುದೇ ನಿಜವಾದ ಸಾಹಿತ್ಯವೆಂದು ಹಿರಿಯ ವಿಮರ್ಶಕ ಡಾ.ಚಂದ್ರಶೇಖರ ನಂಗಲಿ ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ‘ಪಂಪನ ಕಾವ್ಯಗಳಲ್ಲಿ ದೇಸಿ ಮತ್ತು ಮಾರ್ಗ’ ವಿಷಯ ಕುರಿತು ಅವರು ಮಾತನಾಡಿದರು.
ನಮ್ಮ ನಡುವಿರುವ ಅಕ್ಷರ ಹಾಗೂ ಶಬ್ದಗಳಿಗೆ ವಿಶಾಲವಾದ ಅರ್ಥಗಳಿರುತ್ತವೆ. ಅದನ್ನು ಅರ್ಥೈಸಿಕೊಳ್ಳುವ ಹಾಗೂ ಒಂದಕ್ಕೊಂದು ಬೆಸೆಯುವ ಬಗೆಯಲ್ಲಿ ದೇಸಿಯತೆ ಅಡಗಿರುತ್ತದೆ. ಈ ಅರ್ಥದಲ್ಲಿ ನೋಡುವುದಾದರೆ ಪಂಪನ ಕಾವ್ಯ, ಶರಣರ ಪರಂಪರೆ ಹಾಗೂ ಕುವೆಂಪು ಸಾಹಿತ್ಯದ ದೇಸಿಯತೆಯ ಪ್ರತಿರೂಪಗಳಾಗಿದ್ದು, ವರ್ತಮಾನಕ್ಕೆ ಅನುಗುಣವಾಗಿ ಸದಾ ಚಲನಶೀಲವಾಗಿರುತ್ತವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹಿರಿಯ ಸಾಹಿತಿ ಹಾಗೂ ಸಾಧಕರಿಗೆ ನಾಡೋಜ ಪ್ರಶಸ್ತಿ ಕೊಡಲಾಗುತ್ತಿದೆ. ಆದರೆ, ನಿಜವಾಗಿ ನಾಡೋಜ ಅಂದರೆ ಯಾರು ಎಂಬುದನ್ನು 10ನೆ ಶತಮಾನದ ಹಿಂದೆಯೇ ಪಂಪ ವಿವರಿಸಿದ್ದಾನೆ. ಕನ್ನಡವನ್ನು ಬದುಕಾಗಿಸಿಕೊಂಡು ಜೀವಿಸುತ್ತಿರುವ ಸಾಮಾನ್ಯ ಜನಗಳೇ ನಿಜದ ನಾಡೋಜಗಳು ಎಂದಿದ್ದಾನೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಅದರ ವಿಶಾಲತೆ ಕಿರಿದಾಗುತ್ತಿದೆ ಎಂದು ಅವರು ವಿಷಾದಿಸಿದರು.
ಕನ್ನಡ ನಿಜವಾಗಿ ಉಳಿದಿವುದು ಸಾಮಾನ್ಯ ಜನತೆಯಿಂದಲೇ ಹೊರತು ಸಾಹಿತಿಗಳಿಂದಾಗಲಿ, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಂದಾಗಲಿ ಅಲ್ಲ. ಹೀಗಾಗಿ ಜನ ಸಾಮಾನ್ಯರ ಅನುಭವಗಳನ್ನು ಸಾಹಿತ್ಯವಾಗಿಸುವುದರಲ್ಲಿಯೇ ದೇಸಿಯತೆ ಅಡಗಿದೆ ಎಂದು ಅವರು ಹೇಳಿದರು.
ಈ ವೇಳೆ ಸಾಹಿತಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ‘ ವಿದ್ವಾಂಸೆ ಡಾ.ತಮಿಳ್ ಸೆಲ್ವಿ ‘ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ’ ವಿಷಯಗಳ ಕುರಿತು ಮಾತನಾಡಿದರು.







