ಕಾಂಗ್ರೆಸ್‌ಗೆ ದಲಿತರು ಕಾಲಿನ ಮೆಟ್ಟಾಗಿದ್ದಾರೆ: ಯಡಿಯೂರಪ್ಪ
ಬೆಂಗಳೂರು, ಅ.3: ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜನಾಂಗವನ್ನು ಕಾಲಿನ ಮೆಟ್ಟು ಮಾಡಿಕೊಂಡು ಮೇಲೆ ಹತ್ತುತ್ತಿದ್ದಾರೆ. ದಲಿತರನ್ನು ಮುಂದಿಟ್ಟುಕೊಂಡು ಗರೀಬಿ ಹಠಾವೋ ಎಂದು ಹೇಳಿದ ಕಾಂಗ್ರೆಸ್ ಜನರ ಬಡತನ ನಿರ್ಮೂಲನೆ ಮಾಡದೇ ಅದರ ಹೆಸರಿನಲ್ಲಿ ಕಾಂಗ್ರೆಸಿಗರ ಬಡತನ ನಿರ್ಮೂಲನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದ್ದಾರೆ.
ಮಂಗಳವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಲಿತರ ವಿರೋಧಿ. ಅವರ ಹೆಸರಿನಲ್ಲಿ ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಿದ್ದಾರೆ. ಪರಿಶಿಷ್ಟ ಸಮುದಾಯ ಕುರಿತು ಮಾತನಾಡುವ ನೈತಿಕ ಹಕ್ಕನ್ನೆ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರು ಡಾ. ಬಿ.ಆರ್. ಅಂಬೇಡ್ಕರ್‌ರವರಿಗೆ ಅಪಮಾನ ಮಾಡಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ದಲಿತ ನಾಯಕ ಬಾಬು ಜಗಜೀವನರಾಂ ಪ್ರಧಾನಿಯಾಗದಂತೆ ಕಲ್ಲು ಹಾಕಿದವರು ಕಾಂಗ್ರೆಸ್‌ನವರು ಎಂದು ದೂರಿದರು.
ಪರಿಶಿಷ್ಟರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ. ರಾಜ್ಯದಲ್ಲಿ 36 ಪರಿಶಿಷ್ಟ ಮೀಸಲು ವಿಧಾನಸಭಾ ಕ್ಷೇತ್ರಗಳಿವೆ. ಈ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರದ ಎಲ್ಲಾ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಪರಿಶಿಷ್ಟ ಜಾತಿ ವರ್ಗದವರಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿತ್ತು. ಅವರಿಗಾಗಿ ದೊಡ್ಡ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರಕಾರ ಪರಿಶಿಷ್ಟರಿಗೆ ಮೀಸಲಾದ ಹಣದಲ್ಲಿ ಶೇ. 40 ರಷ್ಟನ್ನು ಖರ್ಚು ಮಾಡಿಲ್ಲ ಎಂದು ಟೀಕಿಸಿದರು.
ನ.2ರಿಂದ ಪರಿವರ್ತನಾ ರ್ಯಾಲಿ: ನ.2 ರಿಂದ ಪರಿವರ್ತನಾ ಯಾತ್ರೆ ಆರಂಭವಾಗಲಿದೆ. ಪ್ರತಿ ಮತಗಟ್ಟೆಯಿಂದ ಮೂರು ರಥಯಾತ್ರೆಗೆ ಬರಬೇಕು. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಎಸ್ಸಿ ಮೋರ್ಚಾದ ಅಧ್ಯಕ್ಷ ಡಿ.ಎಸ್. ವೀರಯ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ಮಾಜಿ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಶೇಖರ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರರು ಇದ್ದರು.







