ರಾಮನಾಥ್ ಕೋವಿಂದ್‌ರಿಂದ ಚೊಚ್ಚಲ ವಿದೇಶ ಪ್ರವಾಸ
ಆಫ್ರಿಕ ರಾಷ್ಟ್ರಗಳಿಗೆ ನಾಲ್ಕು ದಿನಗಳ ಭೇಟಿ

ಹೊಸದಿಲ್ಲಿ, ಅ.3: ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಆಫ್ರಿಕದ ರಾಷ್ಟ್ರಗಳಾದ ಡಿಜಿಬೌಟಿ ಹಾಗೂ ಇಥಿಯೋಪಿಯಾ ಭೇಟಿಗಾಗಿ ಮಂಗಳವಾರ ನಿರ್ಗಮಿಸಿದ್ದಾರೆ.
ತನ್ನ ಭೇಟಿಯ ವೇಳೆ ಕೋವಿಂದ್ ಅವರು ಇಥಿಯೋಪಿಯಾದ ಜೊತೆ ವಿಶಾಲವಾದ ಆರ್ಥಿಕ ಸಹಕಾರ ಸೇರಿದಂತೆ ಮಹತ್ವದ ಒಪ್ಪಂದಗಳಿಗೆ ಸಹಿಹಾಕಲಿದ್ದಾರೆಂದು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಹಾಗೂ ದಕ್ಷಿಣ ಆಫ್ರಿಕಾ) ನೀನಾ ಮಲ್ಹೋತ್ರಾ ತಿಳಿಸಿದ್ದಾರೆ.
ಡಿಜಿಬೌಟಿ, ಹಿಂದೂ ಮಹಾಸಾಗರದಲ್ಲಿ ಭಾರತದೊಂದಿನ ಪ್ರಮುಖ ವ್ಯಾಪಾರಿ ಪಾಲುದಾರ ದೇಶವಾಗಿದೆ. 2016-17ರಲ್ಲಿ ಆ ರಾಷ್ಟ್ರದ ಜೊತೆ ಭಾರತದ ದ್ವಿಪಕ್ಷೀಯ ವ್ಯಾಪಾರವು 284 ದಶಲಕ್ಷ ಡಾಲರ್‌ಗಳಾಗಿತ್ತು ಎಂದು ರಾಷ್ಟ್ರಪತಿಯವರ ಪತ್ರಿಕಾ ಕಾರ್ಯದರ್ಶಿ ಅಶೋಕ್ ಮಲಿಕ್ ತಿಳಿಸಿದ್ದಾರೆ. ಆಫ್ರಿಕ ಹಾಗೂ ಹಿಂದೂ ಮಹಾಸಾಗರ ಪ್ರದೇಶವು ಭಾರತದ ವಿದೇಶಾಂಗ ನೀತಿಯಲ್ಲಿ ಕೇಂದ್ರ ಸ್ಥಾನವನ್ನು ಪಡೆದಿದೆ. ಈ ಕಾರಣಕ್ಕಾಗಿ, ರಾಷ್ಟ್ರಪತಿಯವರು ತನ್ನ ಚೊಚ್ಚಲ ವಿದೇಶ ಪ್ರವಾಸಕ್ಕೆ ಆ ಪ್ರದೇಶವನ್ನು ಆಯ್ಕೆ ಮಾಡಿದ್ದಾರೆ ಎಂದು ಮಲಿಕ್ ಹೇಳಿದ್ದಾರೆ.





