ಅಮಿತ್ ಶಾ ಗಿಮಿಕ್ ರಾಜ್ಯದಲ್ಲಿ ವರ್ಕ್‍ಔಟ್ ಆಗುವುದಿಲ್ಲ: ಸಿದ್ದರಾಮಯ್ಯ
ಮೈಸೂರು, ಅ.3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಿಮಿಕ್, ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದರೂ, ರಾಜ್ಯದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಮಂಗಳವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅಮಿತ್ ಶಾ ಕರ್ನಾಟಕಕ್ಕೆ ಬಂದಾಕ್ಷಣ ಜನರ ತೀರ್ಮಾನ ಬದಲಿಸಲು ಸಾಧ್ಯವಿಲ್ಲ, ನಾವು ನೀಡಿರುವ ಆಡಳಿತ ಮತ್ತು ಕಾರ್ಯಕ್ರಮಗಳು ಜನರ ಮನಸ್ಸಿಗೆ ತಟ್ಟಿದೆ. ಹಾಗಾಗಿ ಜನರು ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಅಮಿತ್ ಶಾ ಗಿಮಿಕ್ ಆಗಲಿ ಪ್ರಧಾನಿ ಮೋದಿ ಪ್ರಚಾರವಾಗಲಿ ರಾಜ್ಯದಲ್ಲಿ ವರ್ಕ್‍ಔಟ್ ಆಗುವುದಿಲ್ಲ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಅವರ ಆರ್ಥಿಕ ಪರಿಸ್ಥಿತಿ ಕುರಿತು ಅವರ ಪಕ್ಷದವೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರನ್ನು ಹೆಚ್ಚು ದಿನ ಭಾವನಾತ್ಮಕ ಅಂಶಗಳ ಮೇಲೆ ಹಿಡಿದಿಡಲು ಸಾಧ್ಯವಿಲ್ಲ. ಮೋದಿ ಅವರು ಎಷ್ಟೇ 'ಮನ್ ಕಿ ಬಾತ್' ಹೇಳಿಕೊಂಡು ಇದ್ದರೂ ಏನೂ ಆಗುವುದಿಲ್ಲ. ಸುಬ್ರಹ್ಮಣ್ಯಯನ್ ಸ್ವಾಮಿ, ಯಶವಂತ ಸಿನ್ಹಾ, ಅಡ್ವಾಣಿ ಅಂತವರೇ ಪ್ರಧಾನಿ ಮೋದಿ ಅವರ ಆರ್ಥಿಕ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ಎಸ್.ಎಂ.ಕೃಷ್ಣ ಅವರಿಗೆ ಬಿಜೆಪಿಗೆ ಹೋದ ಮೇಲೆ ಸತ್ಯ ಅರ್ಥವಾಗುತ್ತಿದೆ ಹಾಗಾಗಿ ಅವರು ಈಗ ಪ್ರಧಾನಿ ಮೋದಿಯವರ ಆಡಳಿತದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಾಯ್ಯ ಉತ್ತರಿಸಿದರು.
ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ಗಿಮಿಕ್ ನಡೆಯುವುದಿಲ್ಲ ಎಂದು ಹರಿಹಾಯ್ದರು.
ಇನ್ನು ಗೌರಿ ಲಂಕೇಶ್ ಹತ್ಯೆ ತನಿಖೆ ವಿಚಾರದಲ್ಲಿ ಸುಳಿವು ಸಿಕ್ಕಿರುವ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ತನಿಖೆ ಪ್ರಗತಿಯಲ್ಲಿದೆ. ಗೌರಿ ಒಬ್ಬ ಪತ್ರಕರ್ತೆ, ಪ್ರಗತಿಪರ ಚಿಂತಕರು, ಸಾಮಾಜಿಕ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡಿದ್ದವರು, ಅವರ ಪರವಾಗಿ ದೆಲ್ಲಿಯಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಆದರೆ ಅವರನ್ನು ನಾವು ತಡೆಯಲು ಆಗಲ್ಲ, ನಾವು ಅವರಿಗೆ ಹೇಳಿಯೂ ಇಲ್ಲ ಎಂದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನೀವು ಹರಿಹರಕ್ಕೆ ಬನ್ನಿ ನಾವು ಗೆಲ್ಲಿಸಿಕೊಳ್ಳುತ್ತೇವೆ ಅಂತ ಆಹ್ವಾನಿಸಿದ್ದಾರೆ. ಅದಕ್ಕೆ ಜೆಡಿಎಸ್ ಶಾಸಕ ಶಿವಶಂಕರ್ ಅವರು ಸಿದ್ದರಾಮಯ್ಯ ಅವರು ಬರುವುದಾದರೆ ನಾನು ಅವರ ವಿರುದ್ಧ ಸ್ಪರ್ಧೆ ಮಾಡುವುದಿಲ್ಲ. ನಾನೇ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದಿದ್ದಾರೆ. ಅವರೆಲ್ಲ ನನ್ನ ಮೇಲಿನ ಪ್ರೀತಿಯಿಂದ ಹಾಗೆ ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಎಂ.ಕೆ.ಸೋಮಶೇಖರ್, ವಿಧಾನಪರಿಷತ್ ಸದಸ್ಯ ಧರ್ಮಸೇನಾ, ನಿಗಮ ಮಂಡಲಿ ಅಧ್ಯಕ್ಷರುಗಳಾದ ಸಿದ್ದರಾಜು, ಎಚ್.ಎ.ವೆಂಕಟೇಶ್, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್ ಮತ್ತಿತರರಿದ್ದರು.
ಆಶಾಗೋಪುರ ಕಟ್ಟಿಕೊಳ್ಳಲಿ: ಮುಂದಿನ ಬಾರಿ ದಸರಾ ಉದ್ಘಾಟನೆಯನ್ನು ನಾನೇ ಮಾಡುವುದಾಗಿ ಹೇಳಿರುವ ನಿಮ್ಮ ಹೇಳಿಕೆ ಕುರಿತು ವಿರೋಧ ಪಕ್ಷದವರು ಟೀಕೆ ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಹೌದು! ಮುಂದಿನ ಚುನಾವಣೆಯನ್ನು ನನ್ನ ನೇತೃತ್ವದಲ್ಲೇ ನಡೆಸುವಂತೆ ಈಗಾಗಲೇ ಹೈಕಮಾಂಡ್ ಸೂಚಿಸಿದೆ, ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ, ನಾವೇ ದಸರಾ ಆಚರಣೆ ಮಾಡುತ್ತೇವೆ ಎಂದಿದ್ದೇನೆ ಅಷ್ಟೇ ಎಂದು ಸಮರ್ಥಿಸಿಕೊಂಡರು.
ವಿರೋಧ ಪಕ್ಷದವರಿಗೆ ಮಾತನಾಡಲೂ ಬೇರೆ ಏನೂ ವಿಚಾರ ಇಲ್ಲದಿದ್ದಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆ, ಮುಖ್ಯಮಂತ್ರಿ ಆಗಬೇಕು ಎಂಬ ಆಶಾಗೋಪುರ ಕಟ್ಟಿಕೊಳ್ಳಲಿ ನಾವೇನು ಬೇಡ ಎನ್ನುವುದಿಲ್ಲ ಎಂದ ಅವರು, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಏನು ಹೇಳಿದ್ದರು, ಮುಂದೆ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಟೀಕಿಸಿದರು.







