ಕೆಎಸ್‍ಒಯು ನವೀಕರಣ: ಹೋರಾಟಕ್ಕೆ ವ್ಯವಸ್ಥಾಪನ ಮಂಡಳಿ ತೀರ್ಮಾನ
ಮೈಸೂರು, ಅ.3: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನವೀಕರಣಕ್ಕೆ ಕಾನೂನಾತ್ಮಕ ಹೋರಾಟ ನಡೆಸಲು ವಿವಿಯ ವ್ಯವಸ್ಥಾಪನ ಮಂಡಳಿ ನಿರ್ಣಯ ಕೈಗೊಂಡಿದೆ.
ವಿವಿಯಲ್ಲಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿವಿಯ ವಿಶೇಷ ವ್ಯವಸ್ಥಾಪನ ಮಂಡಳಿ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ವಿವಿಯನ್ನು ಮುಚ್ಚುವ ಇಂಗಿತ ವ್ಯಕ್ತಪಡಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು ಎಂದು ಮೂಲಗಳು ಹೇಳಿವೆ.
ವ್ಯವಸ್ಥಾಪನ ಮಂಡಳಿ ಸದಸ್ಯರೂ ಆದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು, ಸಚಿವರು ಒಂದು ವಿವಿ ಮುಚ್ಚುವುದೆಂದರೆ ಮಕ್ಕಳಾಟ ಎಂದು ಲಘುವಾಗಿ ಪರಿಗಣಿಸಿದಂತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ 2017-18ನೇ ಸಾಲಿನ ಮಾನ್ಯತೆ ನವೀಕರಣಕ್ಕಾಗಿ ಗಂಭೀರ ಕ್ರಮವಹಿಸಬೇಕಾಗಿದೆ ಎಂದು ತಾಕೀತು ಮಾಡಿದ್ದಾರೆ.
ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ(ಯುಜಿಸಿ)ವು ಕೇಳಿದ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ. ಕಳೆದ ನಾಲ್ಕು ತಿಂಗಳಿಂದ ಯುಜಿಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.
ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗದಲ್ಲಿ ತೆರಳಿ, ಯುಜಿಸಿ ಅಧಿಕಾರಿಗಳೊಂದಿಗೆ ಮಾನ್ಯತೆ ನವೀಕರಣ ಸಂಬಂಧ ಮಾತನಾಡಲು ಮನವಿ ಮಾಡಲಾಗುವುದು ಎಂದಿದ್ದಾರೆ.
2018-19ನೆ ಸಾಲಿಗೆ ಅನುಮತಿ ಪಡೆಯಲು ಪ್ರಕ್ರಿಯೆಗೆ ಸೂಚನೆ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿವಿ ಚಟುವಟಿಕೆಗೆ ಅನುಮತಿ ನೀಡುವ ಯುಜಿಸಿಗೆ ಅಗತ್ಯ ದಾಖಲೆಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲು ಸೂಕ್ತ ಕ್ರಮವಹಿಸುವಂತೆ ಕೂಡ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಯಿತು ಎಂದು ಹೇಳಲಾಗಿದೆ.
ಹಿಂದೆ ಕೂಡ ವಿವಿ ಯುಜಿಸಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ, ಯುಜಿಸಿಯ ನಿರ್ದೇಶನದ ಮೇರೆಗೆ ಅದನ್ನು ಹಿಂಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಕ್ತ ವಿವಿ ಕುಲಸಚಿವ ಡಾ.ಕೆ.ಜಿ.ಚಂದ್ರಶೇಖರ್, ಡೀನ್ ಪ್ರೊ.ಮಹಾದೇವಿ, ವ್ಯವಸ್ಥಾಪನ ಮಂಡಳಿ ಸದಸ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.







