ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ: ಸಿದ್ದರಾಮಯ್ಯ

ಮೈಸೂರು, ಅ.3: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಹೂಟಗಳ್ಳಿಯಲ್ಲಿ ಮಂಗಳವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ನಡೆಸುತ್ತೇನೆ. ಇದು ನನ್ನ ಕೊನೆಯ ಚುನಾವಣೆ. ನನ್ನ ತಂದೆ ತಾಯಿ ಸತ್ತಾಗಲು ನಾನು ಕಣ್ಣಿರು ಹಾಕಿರಲಿಲ್ಲ ಆದರೆ ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಹೋಗಬೇಕಾದರೆ ಗಳ ಗಳನೆ ಅತ್ತಿದ್ದೆ. ನನ್ನ ಕಷ್ಟಕಾಲದಲ್ಲಿ ಕೈಹಿಡಿದು ಮೇಲಕ್ಕೆತ್ತಿದ ಚಾಮುಂಡೇಶ್ವರಿ ಕ್ಷೇತ್ರವನ್ನು ನನ್ನ ಕೊನೆ ಉಸಿರಿರೋವರೆಗೂ ಮರೆಯುವುದಿಲ್ಲ ಎಂದು ಭಾವುಕರಾದರು.
ಈಗಾಗಲೇ ವರುಣಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದೇನೆ. ಅಲ್ಲಿಯೂ ದೊಡ್ಡಮಟ್ಟದಲ್ಲೇ ನನ್ನನ್ನು ಗೆಲ್ಲಿಸಿ ಕಳುಹಿಸಿದ್ದಾರೆ. ಆದರೆ 2004ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಆಯ್ಕೆ ಮಾಡಲಿಲ್ಲ ಎಂದಿದ್ದರೆ ನಾನು ಮುಖ್ಯಮಂತ್ರಿಯಾಗಿ ನಿಮ್ಮ ಬಳಿ ಇಂದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಸಭೆಯ ಉದ್ದಕೂ ಯಡಿಯೂರಪ್ಪ ಅವರನ್ನು ಏಕವಚನದಲ್ಲೇ ಸಂಭೋದಿಸಿದ ಸಿಎಂ, ಕುಮಾರಸ್ವಾಮಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಅವರ ಕನಸು ಈಡೇರುವುದಿಲ್ಲ. ನಮ್ಮ ಸರಕಾರದ ಸಾಧನೆ ಮತ್ತು ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಹಚ್ಚಳಿದು ಉಳಿದಿದೆ. ಹಾಗಾಗಿ ನಾವು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಬಾರಿಯೂ ನೀವೆ ಮುಖ್ಯಮಂತ್ರಿಯಾಗಬೇಕು ಎಂದು ಸಭೆಯಲ್ಲಿ ಒಕ್ಕೋರಲಿನ ಕೂಗು ಕೇಳಿ ಬಂದಾಗ ನಿಮ್ಮ ಆಶೀರ್ವಾದವಿದ್ದರೆ ಖಂಡಿತವಾಗಿ ಮುಖ್ಯಮಂತ್ರಿ ಆಗುತ್ತೇನೆ, ನೀವು ನನ್ನನ್ನು ಕೈ ಹಿಡಿಯುತ್ತೀರಿ ಎಂಬ ನಂಬಿಕೆ ಇದೆ ಎಂದರು.
ಸಮಾವೇಶದಲ್ಲಿ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಮಾಜಿ ಶಾಸಕ ಎಂ.ಸತ್ಯನಾರಾಯಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.







