ಸಿಬ್ಬಂದಿ ಅನಾರೋಗ್ಯದಲ್ಲಿದ್ದರೆ ರಜೆ ನಿರಾಕರಿಸಬೇಡಿ: ಎಸ್ಪಿ
ಶಿವಮೊಗ್ಗ, ಅ.3: ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆಯ ಪೇದೆ ಮಂಜುನಾಥ್‌ರವರು ಕರ್ತವ್ಯದಲ್ಲಿದ್ದಾಗಲೇ ಡೆಂಗ್ ಜ್ವರದಿಂದ ಮೃತಪಟ್ಟ ಘಟನೆಯ ನಂತರ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ತಮ್ಮ ಕೆಳಹಂತದ ಪೊಲೀಸ್ ಅಧಿಕಾರಿಗಳಿಗೆ ಸೂಚನೆಯೊಂದನ್ನು ರವಾನಿಸಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಪೊಲೀಸ್ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ರಜೆ ನಿರಾಕರಿಸದಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪೇದೆ ಮಂಜುನಾಥ್‌ರವರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಎಸ್ಪಿಯವರು ಜಿಲ್ಲೆಯ ಎಲ್ಲ ಉಪ ವಿಭಾಗಗಳ ಡಿವೈಎಸ್ಪಿ, ಸರ್ಕಲ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ಗಳಿಗೆ ಪೊಲೀಸ್ ಸಿಬ್ಬಂದಿಗೆ ರಜೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆ ಒಳಗೊಂಡ ಸಂದೇಶ ರವಾನಿಸಿದ್ದಾರೆ.
ನಮ್ಮ ಸಿಬ್ಬಂದಿಯ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸಬೇಕು. ಅವರು ಅನಾರೋಗ್ಯಕ್ಕೀಡಾದ ವೇಳೆ ಅವರಿಗೆ ರಜೆ ನೀಡಬೇಕು. ಜೊತೆಗೆ ಅವರಿಗೆ ಅಗತ್ಯ ಚಿಕಿತ್ಸೆ ಲಭ್ಯವಾಗುವ ವ್ಯವಸ್ಥೆ ಮಾಡಬೇಕು. ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲವೆಂಬುವುದನ್ನು ಅರಿತುಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳಿಗೆ ಎಸ್ಪಿ ತಿಳಿ ಹೇಳಿದ್ದಾರೆ.





