ಪೊಲೀಸರ ಸೇವೆ ತ್ಯಾಗದ ಸಂಕೇತ: ಪಿ.ರಾಜೇಂದ್ರಪ್ರಸಾದ್
ಮಡಿಕೇರಿ, ಅ.3: ಸಮಾಜದ ಶಾಂತಿ, ಸೌಹಾರ್ದವನ್ನು ಕಾಪಾಡಲು ಸದಾ ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸುವ ಪೊಲೀಸರ ಸೇವೆ ತ್ಯಾಗದ ಸಂಕೇತವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಬಣ್ಣಿಸಿದ್ದಾರೆ.
ನಗರದ ಪೊಲೀಸ್ ಸಮುದಾಯ ಭವನ ಮೈತ್ರಿಯಲ್ಲಿ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ ಹಾಗೂ ಸ್ನೇಹ ಮಿಲನದ ಜಂಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಶಾಂತಿ, ಸುವ್ಯವಸ್ಥೆಗಾಗಿ ಸದಾ ಶ್ರಮಿಸುವ ಪೊಲೀಸರು ತಮ್ಮ ಕುಟುಂಬದ ಆಗುಹೋಗುಗಳಿಗೂ ಸ್ಪಂದಿಸಲಾಗದ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಿರುತ್ತಾರೆ. ಒತ್ತಡದ ಕಾರ್ಯನಿರ್ವಹಣೆಯಿಂದ ದೈಹಿಕ ಹಾಗೂ ಮಾಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ತೋರಲು ಅಸಾಧ್ಯವಾಗುತ್ತದೆ. ಆದ್ದರಿಂದ ಸಮಾಜಕ್ಕಾಗಿ ತ್ಯಾಗದ ರೂಪದಲ್ಲಿ ದುಡಿದ ಪೊಲೀಸರು ನಿವೃತ್ತಿಯಾದ ನಂತರವಾದರೂ ತಮ್ಮ ಕುಟುಂಬದ ಸದಸ್ಯರೊಂದಿ
ದಿನ ಕಳೆಯುವುದರೊಂದಿಗೆ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕೆಂದು ರಾಜೇಂದ್ರಪ್ರಸಾದ್ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎ.ಅಪ್ಪಯ್ಯ, ಸಂಘದ ಚಟುವಟಿಕೆ, ಆರ್ಥಿಕ ಸ್ಥಿತಿ ಗತಿ ಮತ್ತು ಆರೋಗ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ನಿಧಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಮಣವಟ್ಟೀರ ಪೊನ್ನಪ್ಪಸ್ಮರಣಾರ್ಥ ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಮತ್ತು ಉಡುಪಿಯ ಆಚಾರ್ಯ ಅವರು, ತಮ್ಮ ತಾಯಿ ಸರಸ್ವತಿ ಅವರ ಹೆಸರಿನಲ್ಲಿ ನೀಡಿರುವ ದತ್ತಿನಿಧಿಯಡಿ ಪ್ರತಿಭಾವಂತ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು.
ಇದೇ ಸಂದರ್ಭ ರಾಷ್ಟ್ರಪತಿ ಪದಕ ವಿಜೇತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್, ಮಂಡು ವಂಡ ಕೆ.ಗಣೇಶ್, ಪಂದಿಕಂಡ ಸುಬ್ಬಯ್ಯ ಅವರುಗಳನ್ನು ಕಾರ್ಯ ಕ್ರಮದಲ್ಲಿ ಸನ್ಮಾನಿಸಲಾಯಿತು.
ಸಂಘದ ಮೂಲಕ ಉತ್ತಮ ಪೊಲೀಸ್ ಅಧಿಕಾರಿಯೆಂದು ಈ ಬಾರಿ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸಭೆಯಲ್ಲಿ ಗೌರವ ಅರ್ಪಿಸಲಾಯಿತು.







