ಮಣಿಪುರ ಆಟಗಾರರ ಹೆತ್ತವರಿಗೆ ದಿಲ್ಲಿಗೆ ತೆರಳುವ ಭಾಗ್ಯ
ಪ್ರಯಾಣದ ವ್ಯವಸ್ಥೆ ಮಾಡಿಕೊಟ್ಟ ರೆನೆಡಿ ಸಿಂಗ್

ಇಂಫಾಲ್, ಅ.3: ಭಾರತದಲ್ಲಿ ಪಶ್ಚಿಮ ಬಂಗಾಳ, ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಆದರೆ, ಮುಂಬರುವ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಭಾರತದ 21 ಆಟಗಾರರ ಪೈಕಿ ಪುಟ್ಟ ಈಶಾನ್ಯ ರಾಜ್ಯ ಮಣಿಪುರದ ಒಟ್ಟು 8 ಆಟಗಾರರು ಭಾಗವಹಿಸುತ್ತಿದ್ದಾರೆ. ಇದೀಗ ಮಣಿಪುರ ರಾಜ್ಯ ಭಾರತದ ಫುಟ್ಬಾಲ್ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ.
ಮಣಿಪುರದ ಅಮರ್‌ಜಿತ್ ಸಿಂಗ್ ಕಿಯಮ್ ಭಾರತದ ಅಂಡರ್-17 ತಂಡದ ನಾಯಕನಾಗಿದ್ದಾರೆ. ಮಣಿಪುರದ ಎಲ್ಲ ಫುಟ್ಬಾಲ್ ಆಟಗಾರರು ಕಡು ಬಡತನದ ಹಿನ್ನೆಲೆಯಿಂದ ಬಂದವರು. ಫುಟ್ಬಾಲ್ ಕ್ರೀಡೆಯ ಮೇಲಿನ ಸಮರ್ಪಣಾಭಾವ ಹಾಗೂ ಅಭಿಮಾನ ಈ ಆಟಗಾರರನ್ನು ಇಲ್ಲಿಯ ತನಕ ಸೆಳೆದು ತಂದಿದೆ.
ಭಾರತದ ಮಾಜಿ ನಾಯಕ ಹಾಗೂ ಮಣಿಪುರ ಮೊದಲ ಫುಟ್ಬಾಲ್ ಸೂಪರ್‌ಸ್ಟಾರ್ ಆಗಿರುವ ರೆನೆಡಿ ಸಿಂಗ್ ರಾಜ್ಯದೆಲ್ಲೆಡೆ ಸಂಚರಿಸಿ ಫುಟ್ಬಾಲ್ ಆಟಗಾರರ ಕುಟುಂಬದವರನ್ನು ಭೇಟಿಯಾಗಿದ್ದಾರೆ. ಮಣಿಪುರ ಜೂನಿಯರ್ ಫುಟ್ಬಾಲ್ ಆಟಗಾರರ ಹೆತ್ತವರಿಗೆ ತಮ್ಮ ಮಕ್ಕಳ ಆಟವನ್ನು ಕಣ್ಣಾರೆ ನೋಡಲು ಇಂಫಾಲ್‌ನಿಂದ ಹೊಸದಿಲ್ಲಿಗೆ ಬರುವ ಎಲ್ಲ ವ್ಯವಸ್ಥೆಯನ್ನು ಮಾಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
‘‘ನಾನು ಮಣಿಪುರದ ಎಲ್ಲ ಆಟಗಾರರನ್ನು ದಿಲ್ಲಿಯಲ್ಲಿ ಭೇಟಿಯಾಗಿದ್ದೇನೆ. ಆದರೆ ಅವರ ಕುಟುಂಬದವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಎಲ್ಲ ಆಟಗಾರರ ಕುಟುಂಬದವರನ್ನು ಖುದ್ದಾಗಿ ನೋಡಲು ನಿರ್ಧರಿಸಿದೆ. ನಾನು ನಾಯಕ ಅಮರ್‌ಜಿತ್ ಹಾಗೂ ಜಾಕ್ಸನ್ ಅವರ ಮನೆಗೆ ತೆರಳಿದ್ದೆ. ಅಲ್ಲಿ ಅವರ ಹೆತ್ತವರು ನನ್ನನ್ನು ನೋಡಿ ಕಣ್ಣೀರಿಟ್ಟರು. ಅವರು ತಮ್ಮ ಮಕ್ಕಳ ಆಟವನ್ನು ನೋಡುವ ಆಸೆ ಹೊಂದಿದ್ದರು. ಆದರೆ ಕಡು ಬಡತನದ ಹಿನ್ನೆಲೆಯಲ್ಲಿ ಅವರಿಗೆ ದಿಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂಬ ಅಂಶ ನನ್ನ ಅರಿವಿಗೆ ಬಂತು. ಎಲ್ಲ ಕಾರ್ಪೊರೇಟ್ ಕಂಪೆನಿಗಳನ್ನು ಸಂಪರ್ಕಿಸಿ ಆಟಗಾರರ ಹೆತ್ತವರಿಗೆ ವಿಮಾನದ ಟಿಕೆಟ್ ಹಾಗೂ ಇತರ ಪ್ರಯಾಣ ಭತ್ತೆಯನ್ನು ಭರಿಸುವಂತೆ ಮನವಿ ಮಾಡಿದ್ದೆ. ಅದಕ್ಕೆ ಎಲ್ಲ ಕಂಪೆನಿಯವರು ಮುಂದೆ ಬಂದು ಸಹಾಯ ಮಾಡಿದ್ದಾರೆ’’ಎಂದು ಕೆನೆಡಿ ಸಿಂಗ್ ಹೇಳಿದ್ದಾರೆ.
ಅಂಡರ್-17 ವಿಶ್ವಕಪ್‌ನಲ್ಲಿ ಆಡುತ್ತಿರುವ ಮಣಿಪುರ ಆಟಗಾರರ ಕುಟುಂಬದವರದ್ದು ಒಂದೊಂದು ಕರುಣಾಜನಕ ಕಥೆ. ಮಿಡ್‌ಫೀಲ್ಡರ್ ನಿಥೋಂಗ್‌ಗಾಂಬ ತಾಯಿ ಇಂಫಾಲ್‌ನಲ್ಲಿ ಚಿಕ್ಕ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಒಣ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನಿಥೋಂಗ್‌ಗಾಂಬರ ಸಹೋದರಿ ತಾಯಿಗೆ ನೆರವಾಗುತ್ತಾರೆ. ಅ.6 ರಂದು ದಿಲ್ಲಿಯಲ್ಲಿ ನಡೆಯಲಿರುವ ಭಾರತ-ಅಮೆರಿಕ ನಡುವಿನ ವಿಶ್ವಕಪ್ ಪಂದ್ಯ ವೀಕ್ಷಿಸಲು ಇಬ್ಬರಿಗೂ ಮನೆ ಬಿಟ್ಟು ಹೋಗುವ ಪರಿಸ್ಥಿತಿಯಿಲ್ಲ. ಯಾರಾದರೊಬ್ಬರು ಮನೆಯಲ್ಲಿರಬೇಕಾಗುತ್ತದೆ. ನಿಥೋಂಗ್‌ಗಾಂಬರ ತಂದೆ 3 ತಿಂಗಳ ಹಿಂದೆಯಷ್ಟೇ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಮನೆಯಲ್ಲಿದ್ದ ಜಾನುವಾರುಗಳನ್ನು ಮಾರಿ ಚಿಕಿತ್ಸೆ ವೆಚ್ಚ ಭರಿಸಿದ್ದಾರೆ.
ಇದೀಗ ನಿಥೋಂಗ್‌ಗಾಂಬ ಮನೆಯ ಬಡತನ ನಿವಾರಿಸಲು ಯತ್ನಿಸುತ್ತಿದ್ದಾರೆ.
ಡಿಫೆಂಡರ್ ಬೊರಿಸ್ ಥಾಂಗ್‌ಜಾಮ್ ಕುಟುಂಬ ಎರಡು ಕೊಠಡಿಯ ಕಾಂಕ್ರಿಟ್ ಕಟ್ಟಡದಲ್ಲಿ ವಾಸವಾಗಿದೆ. ಗೋಡೆಯಲ್ಲಿನ ಸಿಮೆಂಟ್ ಕಿತ್ತುಹೋಗಿದೆ. ಮನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಭಾರತದ ನಾಯಕ ಅಮರ್‌ಜಿತ್ ಸಿಂಗ್‌ರ ತಾಯಿ ಪ್ರತಿದಿನ ಬೆಳಗ್ಗೆ 2 ಗಂಟೆಗೆ ಏಳುತ್ತಾರೆ. ಮೂರ್ನಾಲ್ಕು ಗಂಟೆ ನಿದ್ದೆ ಮಾಡುವ ಅಮರ್‌ಜಿತ್ ತಾಯಿ ಮಾರುಕಟ್ಟೆಗೆ ತೆರಳಿ ಮೀನು ಖರೀದಿಸಿ ಮನೆಮನೆಗೆ ತೆರಳಿ ಮಾರಾಟ ಮಾಡುತ್ತಾರೆ.
ಜಾಕ್ಸನ್ ತಂದೆ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಅವರ ತಾಯಿ ಬಟ್ಟೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಗೋಲ್‌ಕೀಪರ್ ಧೀರಜ್‌ರ ತಾಯಿ ಮುನ್ಸಿಪಾಲಿಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಣಿಪುರದ ಉಳಿದ ಆಟಗಾರರಿಗೆ ಹೋಲಿಸಿದರೆ ಧೀರಜ್ ಕುಟುಂಬ ಚೆನ್ನಾಗಿದೆ.
‘‘ನಾನು ಧೀರಜ್‌ನನ್ನು ನಾಗರಿಕ ಸೇವೆಗೆ ಸೇರಿಸಲು ಬಯಸಿದ್ದೆ. ಆತ ಓದುವುದರಲ್ಲಿ ಜಾಣನಾಗಿದ್ದಾನೆ. ಆತನೀಗ 12ನೆ ತರಗತಿಯಲ್ಲಿ ಓದುತ್ತಿದ್ದಾನೆ’’ ಎಂದು ಧೀರಜ್ ತಾಯಿ ಹೇಳಿದ್ದಾರೆ.
ನಾಯಕ ಅಮರ್‌ಜಿತ್ ಸಿಂಗ್ ಸಂಬಂಧಿ, ಮಿಡ್‌ಫೀಲ್ಡರ್ ಜಿಕ್ಸನ್ ಸಿಂಗ್ ತಾಯಿ ಇಂಫಾಲ್‌ನ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಜೀಕ್ಸನ್ ತಂದೆ 2015ರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಸಾವನ್ನಪ್ಪಿದ್ದರು.
ಮಣಿಪುರ ಆಟಗಾರರ ಹೆತ್ತವರು ಸೋಮವಾರ ಮಧ್ಯಾಹ್ನ ಇಪಾನ್‌ನ ಕಾರ್ಪೊರೇಟ್ ಹೌಸ್‌ನಲ್ಲಿ ಒಂದೆಡೆ ಸೇರಿದ್ದು, ಎಲ್ಲರಿಗೂ ದಿಲ್ಲಿಯಲ್ಲಿ ಖರ್ಚುವೆಚ್ಚಕ್ಕೆ 20,000 ರೂ. ನಗದು ನೀಡಲಾಗಿದೆ. ಎಲ್ಲರೂ ದಿಲ್ಲಿಗೆ ತೆರಳಿ ವಿಶ್ವಕಪ್‌ನಲ್ಲಿ ತಮ್ಮ ಮಕ್ಕಳ ಆಟವನ್ನು ಕಣ್ತುಂಬಿಕೊಳ್ಳುವ ಕಾತರದಲ್ಲಿದ್ದಾರೆ.







