ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಧರಣಿ

ಮಂಡ್ಯ, ಅ.3: ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಬೇಬಿ ಬೆಟ್ಟದ ಸರ್ವೇ ನಂ.1ರ ಅಮೃತ್ ಮಹಲ್ ಕಾವಲ್‌ನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿ ಬೇಬಿ ಬೆಟ್ಟ ಉಳಿವು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಮಂಗಳವಾರ ನಗರದಲ್ಲಿ ಧರಣಿ ನಡೆಸಿದರು.
ಜಯಚಾಮರಾಜೇಂದ್ರ (ಸಂಜಯ) ವೃತ್ತದಲ್ಲಿ ಜಮಾಯಿಸಿದ ಧರಣಿನಿರತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಗಣಿಗಾರಿಕೆಯಲ್ಲಿನ ಸ್ಫೋಟಕಗಳಿಂದ ಶಾಲೆ, ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಜಲ್ಲಿ ಕ್ರಷರ್ ಧೂಳಿನಿಂದ ಬೆಳೆ ಮತ್ತು ಪರಿಸರ ಹಾನಿಗೊಂಡಿದೆ. ಜನಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ ಎಂದು ಧರಣಿನಿರತರು ಆತಂಕ ವ್ಯಕ್ತಪಡಿಸಿದರು.
ಅಲ್ಲದೆ ಅಕ್ರಮ ಕಲ್ಲುಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೂ ಅಪಾಯವಿದ್ದು, ಬೇಬಿ ಬೆಟ್ಟದ ಪ್ರಸಿದ್ಧ ಸಿದ್ದಲಿಂಗೇಶ್ವರ ಹಾಗೂ ಮಹದೇಶ್ವರ ದೇವಸ್ಥಾನಗಳಿಗೆ ಇದರಿಂದ ಹಾನಿಯಾಗಿದೆ. ಟಿಪ್ಪರ್ ಸಂಚಾರದಿಂದ ರಸ್ತೆ ಹದಗೆಟ್ಟಿದ್ದು, ಅಪಘಾತಗಳೂ ಸಂಭವಿಸುತ್ತಿದೆ ಎಂದರು.
ಶಾಸಕ ಮತ್ತು ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ, ರೈತ ಸಂಘದ ಮುಖಂಡರಾದ ಶಂಭೂನಹಳ್ಳಿ ಸುರೇಶ್, ಜಿಪಂ ಮಾಜಿ ಸದಸ್ಯ ಕೆಂಪೂಗೌಡ, ಲಿಂಗಪ್ಪಾಜಿ, ಬಿ.ಬೊಮ್ಮೇಗೌಡ, ಲತಾ, ಗ್ರಾಮಸ್ಥರಾದ ಮಂಜುನಾಥ್, ಸಿದ್ದಲಿಂಗದೇವರು, ಸೋಮಣ್ಣ, ನಾರಾಯಣಪ್ಪ, ಲೋಕೇಶ್‌ಮೂರ್ತಿ, ಕುಮಾರ್, ನಾರಾಯಣ, ತಮ್ಮಯ್ಯ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ: ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವಂತಿಲ್ಲ. ಆದರೂ ಕೆಲ ಪಟ್ಟಭದ್ರರು ತಮ್ಮ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಸಂಬಂಧಿಸಿದ ಇಲಾಖೆಗಳು ಕ್ರಮವಹಿಸಿಲ್ಲ. ಅಲ್ಲದೆ ಅಕ್ರಮ ಕಲ್ಲುಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ರಾಜ್ಯ ಸರಕಾರ, ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದ್ದರೂ ಪ್ರತಿಕ್ರಿಯಿಸಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೈಗೊಳ್ಳಬೇಕೆಂದು ಧರಣಿನಿರತರು ಆಗ್ರಹಿಸಿದರು.







