‘ಖೇಲ್‌ರತ್ನ’ ಕೈತಪ್ಪಿದ್ದಕ್ಕೆ ದೀಪಾ ಮಲಿಕ್ ಮತ್ತೆ ಅಸಮಾಧಾನ

ಹೊಸದಿಲ್ಲಿ, ಅ.3: ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ಈವರ್ಷದ ಪ್ರತಿಷ್ಠಿತ ‘ಖೇಲ್‌ರತ್ನ’ ಪ್ರಶಸ್ತಿಗೆ ತನ್ನನ್ನು ಕಡೆಗಣಿಸಿರುವುದಕ್ಕೆ ಮತ್ತೊಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘2016ರಂತೆಯೇ ಈ ವರ್ಷ ಕೂಡ ಪ್ರಶಸ್ತಿ ಆಯ್ಕೆ ಸಮಿತಿಯು ತನ್ನನ್ನು ಕಡೆಗಣಿಸಿ ಎಡವಟ್ಟು ಮಾಡಿದೆ. ಕಳೆದ ವರ್ಷ ನಾಲ್ವರಿಗೆ ‘ಖೇಲ್‌ರತ್ನ’ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ ಕೂಡ ಹಾಗೆಯೇ ಮಾಡಬಹುದಿತ್ತು. ನಾನು ಮುಂದೆಯೂ ಪ್ರಶಸ್ತಿಗಾಗಿ ಪ್ರಯತ್ನ ಮುಂದುವರಿಸುವೆ. ಕಳೆದ ನಾಲ್ಕು ವರ್ಷದಲ್ಲಿ ನನ್ನ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿತ್ತು’’ ಎಂದು ಆಸ್ಟ್ರೇಲಿಯ ಹೈಕಮಿಶನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ.
‘‘2018ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ನಾನು ವಿಶ್ವ ದಾಖಲೆ ಮುರಿದರೆ ‘ಖೇಲ್‌ರತ್ನ’ ಪ್ರಶಸ್ತಿ ನೀಡಬಹುದು. ಆದರೆ, ನಾನು ಈಗಲೂ ಸಕಾರಾತ್ಮಕವಾಗಿ ಯೋಚಿಸುತ್ತಿದ್ದೇನೆ. ಕ್ರೀಡೆ ನಾನು ಯೋಚಿಸಿದ್ದಕ್ಕಿಂತ ಹೆಚ್ಚು ನೀಡಿದೆ’’ ಎಂದು ಈ ವರ್ಷ ಪದ್ಮಶ್ರೀ ಪ್ರಶಸ್ತಿ ಹಾಗೂ 2012ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ದೀಪಾ ಮಲಿಕ್ ಹೇಳಿದ್ದಾರೆ.
2016ರಲ್ಲಿ ಪಿ.ವಿ.ಸಿಂಧು, ದೀಪಾ ಕರ್ಮಾಕರ್, ಸಾಕ್ಷಿ ಮಲಿಕ್ ಹಾಗೂ ಜಿತು ರಾಯ್‌ಗೆ ‘ಖೇಲ್‌ರತ್ನ’ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ ಎರಡು ಬಾರಿಯ ಪ್ಯಾರಾಲಿಂಪಿಯನ್ ಚಾಂಪಿಯನ್ ದೇವೇಂದ್ರ ಜಜಾರಿಯಾ ಹಾಗೂ ಭಾರತದ ಮಾಜಿ ಹಾಕಿ ನಾಯಕ ಸರ್ದಾರ್ ಸಿಂಗ್ ‘ಖೇಲ್‌ರತ್ನ’ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.







