ಭಾರತ ‘ಎ’ ತಂಡಕ್ಕೆ ಸರಣಿ ಜಯ
ನ್ಯೂಝಿಲೆಂಡ್ ‘ಎ’ ತಂಡಕ್ಕೆ ಇನಿಂಗ್ಸ್ ಹಾಗೂ 26 ರನ್ ಸೋಲು

ವಿಜಯವಾಡ, ಅ.3: ಸ್ಪಿನ್ನರ್‌ಗಳಾದ ಕರಣ್ ಶರ್ಮ ಹಾಗೂ ಶಾಬಾಝ್ ನದೀಮ್ ಸ್ಪಿನ್ ಮೋಡಿಗೆ ತತ್ತರಿಸಿದ ನ್ಯೂಝಿಲೆಂಡ್ ಎ ತಂಡ ಭಾರತ ವಿರುದ್ಧದ ಎರಡನೆ ಚತುರ್ದಿನ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 26 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ ಭಾರತ ‘ಎ’ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಪ್ರವಾಸಿ ನ್ಯೂಝಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 211 ರನ್ ಗಳಿಸಿತ್ತು. ಎರಡನೆ ಇನಿಂಗ್ಸ್ ನಲ್ಲಿ ಕೇವಲ 210 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಮೊದಲ ಇನಿಂಗ್ಸ್ ನಲ್ಲಿ 447 ರನ್ ಗಳಿಸಿತ್ತು.
ನಾಲ್ಕನೆ ಹಾಗೂ ಅಂತಿಮ ದಿನವಾದ ಮಂಗಳವಾರ ನ್ಯೂಝಿಲೆಂಡ್ ಎ ತಂಡ 1 ವಿಕೆಟ್ ನಷ್ಟಕ್ಕೆ 104 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿತು.
ಲೆಗ್ ಸ್ಪಿನ್ನರ್ ಕರಣ್ ಶರ್ಮ(5-78) ಹಾಗೂ ಎಡಗೈ ಸ್ಪಿನ್ನರ್ ನದೀಮ್(4-41)ದಾಳಿಗೆ ಕಂಗಾಲಾದ ಕಿವೀಸ್ ಪಡೆ ಕೇವಲ 106 ರನ್ ಗಳಿಸುವಷ್ಟರಲ್ಲಿ ಉಳಿದ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದ ರೈಲ್ವೇಸ್ ಬೌಲರ್ ಶರ್ಮ ಎರಡನೆ ಪಂದ್ಯದಲ್ಲಿ ಮತ್ತೊಮ್ಮೆ 8 ವಿಕೆಟ್ ಉಡಾಯಿಸಿದರು.ನ್ಯೂಝಿಲೆಂಡ್‌ನ ಪರ ಹೆನ್ರಿ ನಿಕೊಲ್ಸ್(94) ಏಕಾಂಗಿ ಹೋರಾಟ ನೀಡಿದರು. ಉಳಿದ ಬ್ಯಾಟ್ಸ್ ಮನ್‌ಗಳು ನಿಕೊಲ್ಸ್ ಗೆ ಸಾಥ್ ನೀಡಲಿಲ್ಲ. ನಿಕೊಲ್ಸ್ ಹಾಗೂ ರಾವಲ್ ಎರಡನೆ ವಿಕೆಟ್‌ನಲ್ಲಿ 105 ರನ್ ಜೊತೆಯಾಟ ನಡೆಸಿದರೂ ತಂಡವನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡಲು ವಿಫಲರಾದರು.
ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 31 ರನ್‌ಗಳಿಂದ ಸೋತಿರುವ ನ್ಯೂಝಿಲೆಂಡ್ ಎ ತಂಡ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ.
ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಕರಣ್-ನದೀಮ್ ಜೋಡಿಯನ್ನು ಹೇಗೆ ಎದುರಿಸಬೇಕೆಂಬ ಸುಳಿವು ಸಿಗಲಿಲ್ಲ. ಕರಣ್ ಸರಣಿಯಲ್ಲಿ ಒಟ್ಟು 16 ವಿಕೆಟ್‌ಗಳನ್ನು ಕಬಳಿಸಿದರೆ, ನದೀಮ್ 14 ವಿಕೆಟ್‌ಗಳನ್ನು ಉರುಳಿಸಿ ತಾನೇನು ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟರು.
ಸಂಕ್ಷಿಪ್ತ ಸ್ಕೋರ್
►ನ್ಯೂಝಿಲೆಂಡ್: ಮೊದಲ ಇನಿಂಗ್ಸ್ 211, ಎರಡನೆ ಇನಿಂಗ್ಸ್ 210(ಹೆನ್ರಿ ನಿಕೊಲ್ಸ್ 94, ಕರಣ್ ಶರ್ಮ 5/78, ಶಾಬಾಝ್ ನದೀಮ್ 4-41)
►ಭಾರತ ಎ ತಂಡ: ಮೊದಲ ಇನಿಂಗ್ಸ್: 447 ರನ್







