2018ರ ಕಾಮನ್‌ವೆಲ್ತ್ ಗೇಮ್ಸ್ ಬ್ಯಾಟನ್ ಹೊಸದಿಲ್ಲಿಗೆ ಆಗಮನ

ಹೊಸದಿಲ್ಲಿ, ಅ.3: ಆಸ್ಟ್ರೇಲಿಯದಲ್ಲಿ ನಡೆಯಲಿರುವ 2018ರ ಕಾಮನ್‌ವೆಲ್ತ್ ಗೇಮ್ಸ್‌ನ ಕ್ವೀನ್ಸ್ ಬ್ಯಾಟನ್ ಮಂಗಳವಾರ ಭಾರತಕ್ಕೆ ಆಗಮಿಸಿದೆ. ಭಾರತದ ಒಲಿಂಪಿಕ್ಸ್ ಸಂಸ್ಥೆಯ(ಐಒಎ)ಜೊತೆ ಕಾರ್ಯದರ್ಶಿ ರಾಕೇಶ್ ಗುಪ್ತಾ ಕ್ವೀನ್ಸ್ ಬ್ಯಾಟನ್‌ನ್ನು ಸ್ವೀಕರಿಸಿದರು. ಬ್ಯಾಟನ್ ಬುಧವಾರ ಆಗ್ರಾಕ್ಕೆ ಪ್ರಯಾಣಿಸಲಿದೆ. ಆನಂತರ ಅಕ್ಟೋಬರ್ 5 ರಂದು ಉತ್ತರಖಂಡದ ನೈನಿತಾಲ್‌ಗೆ ಕೊಂಡೊಯ್ಯಲಾಗುತ್ತದೆ.
‘‘ಕಾಮನ್‌ವೆಲ್ತ್ ಗೇಮ್ಸ್‌ನ ಪ್ರಮುಖ ಬ್ಯಾಟನ್ ರಿಲೇ ಕಾರ್ಯಕ್ರಮ ಅ.8 ರಂದು ಹೊಸದಿಲ್ಲಿಯ ಮೇಜರ್ ಧ್ಯಾನ್‌ಚಂದ್ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್‌ನ ನಾಲ್ವರು ಅಧಿಕಾರಿಗಳು ಹಾಗೂ ಸ್ಥಳೀಯ ಸಂಘಟನಾ ಸಮಿತಿಯು ಬ್ಯಾಟನ್ ಜೊತೆ ಇರಲಿದ್ದಾರೆ’’ ಎಂದು ಗುಪ್ತಾ ತಿಳಿಸಿದ್ದಾರೆ.
ಬ್ಯಾಟನ್ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದು ಅಕ್ಟೋಬರ್ 9 ರಂದು ಬಾಂಗ್ಲಾದೇಶಕ್ಕೆ ತೆರಳಲಿದೆ.
ಕಾಮನ್‌ವೆಲ್ತ್ ಗೇಮ್ಸ್ ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್ ನಗರದಲ್ಲಿ ಮುಂದಿನ ವರ್ಷದ ಎಪ್ರಿಲ್ 4-15ರ ತನಕ ನಡೆಯಲಿದೆ.
ಕ್ವೀನ್ಸ್ ಬ್ಯಾಟನ್ ಆರು ಕಾಮನ್‌ವೆಲ್ತ್ ಪ್ರದೇಶಗಳಾದ ಆಫ್ರಿಕ, ಅಮೆರಿಕ, ಕೆರಿಬಿಯನ್, ಯುರೋಪ್, ಏಷ್ಯಾ ಹಾಗೂ ಒಶಿಯಾನಕ್ಕೆ ತೆರಳಲಿದ್ದು ಡಿಸೆಂಬರ್‌ಗೆ ಆಸ್ಟ್ರೇಲಿಯಕ್ಕೆ ತಲುಪಲಿದೆ. ಆಸ್ಟ್ರೇಲಿಯದಲ್ಲಿ 100 ದಿನಗಳ ಕಾಲ ಸಂಚರಿಸಲಿರುವ ಬ್ಯಾಟನ್ ಎ.4 ರಂದು ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ತನ್ನ ಪಯಣ ಅಂತ್ಯಗೊಳಿಸಲಿದೆ.







