ರಾಜ ಕಾಲುವೆಗಳನ್ನು ಶೀಘ್ರವೇ ಗುರುತಿಸಿ, ಒತ್ತುವರಿಯಾಗಿರುವುದನ್ನು ಈ ಕೂಡಲೇ ತೆರವುಗೊಳಿಸಬೇಕು: ಎಸ್.ಎ. ರವೀಂದ್ರನಾಥ್

ದಾವಣಗೆರೆ,ಅ.4: ನಗರದಲ್ಲಿರುವ ರಾಜ ಕಾಲುವೆಗಳನ್ನು ಶೀಘ್ರವೇ ಗುರುತಿಸಿ, ಒತ್ತುವರಿಯಾಗಿರುವುದನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಲವಾರು ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದಕ್ಕೆ ರಾಜ ಕಾಲುವೆಗಳ ಅತಿಕ್ರಮಣವೇ ಕಾರಣ ಎಂದು ಆರೋಪಿಸಿದ ಅವರು, ಮಳೆಯಿಂದ ಹಾನಿಗೊಳಗಾದ ಸ್ವಾಮಿ ವಿವೇಕಾನಂದ, ವಿನಾಯಕ ಸೇರಿದಂತೆ ಅನೇಕ ಬಡಾವಣೆಗಳಲ್ಲಿ 4-5 ಅಡಿ ನೀರು ನಿಂತಿದೆ. ಅಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಪೂಜಿ ಪಾಲಿಟೆಕ್ನಿಕಲ್ ಕಾಲೇಜಿನವರು ನಿರ್ಮಿಸಿರುವ ದೊಡ್ಡಗೋಡೆಯೂ ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಮಹಾನಗರದ ಹಿಂದುಳಿದ ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿ ಬಹಳಷ್ಟು ಹಾನಿಯಾಗಿದೆ. ನಿಗದಿತ ಯೋಜನೆ ಇಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲದೆ ನೀರು ಹರಿದು ಹೋಗುತ್ತಿಲ್ಲ. ಹೊಸ ಬಡಾವಣೆಗಳ ಗೋಳು ಇದೇ ಪರಿಸ್ಥಿತಿಯಲ್ಲಿದೆ. ಕೆಲ ಪ್ರದೇಶಗಳಲ್ಲಿನ ಹಳ್ಳಗಳನ್ನು ಮುಚ್ಚಿಹಾಕಿ ಬಡಾವಣೆಗಳ ರಸ್ತೆ ಅಭಿವೃದ್ಧಿಪಡಿಸಿರುವುದೂ ಕಾರಣವಾಗಿದೆ ಎಂದ ಅವರು, ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಸ್ವಾರ್ಟ್ ಆಗಬೇಕಿರುವ ಸಿಟಿ, ವಸ್ರ್ಟ್ ಸಿಟಿ ಆಗುತ್ತಿದೆ. ಇದಕ್ಕೆ ಅವಕಾಶ ನೀಡದೆ, ಅಭಿವೃದ್ಧಿ ಮಾಡಬೇಕು. ಯಾವುದೇ ರಾಜಕೀಯ ಮಾಡದೇ ಪರಿಹಾರ ಕಾಮಗಾರಿಗಳು ನಡೆಯಬೇಕೆಂದು ಅವರು ಆಗ್ರಹಿಸಿದರು.
ಶ್ವೇತಪತ್ರ ಹೊರಡಿಸಿ:
ಸ್ಮಾರ್ಟ್‍ಸಿಟಿ ಯೋಜನೆಗಾಗಿ ಕೇಂದ್ರ ಸರಕಾರ 194 ಕೋಟಿ ರು. ಬಿಡುಗಡೆ ಮಾಡಿದೆ. ಆದರೆ, ಈ ಹಣ ಇನ್ನೂ ಬಳಕೆಯಾಗಿಲ್ಲ. ಇದಕ್ಕೆ ಕಾರಣ ಏನೂ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರಕಾರದ ಹಣದ ಅಭಿವೃದ್ಧಿ ಕಾಮಗಾರಿಗಳು ನಡೆಯಬಾರದೆಂದು ಈ ರೀತಿ ಮಾಡಲಾಗುತ್ತಿದೆ ಎಂಬ ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರದಿಂದಲೇ 2000 ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಸಚಿವರು ಹೇಳಿಕೆ ನೀಡಿದ್ದಾರೆ. ಈ ಹಣ ಬಳಕೆಯ ಬಗ್ಗೆ ಶ್ವೇತ ಪತ್ರ ಹೊರಡಿಸಿಬೇಕು. ಇದರಿಂದ ಯಾವ ಯೋಜನೆಯ ಹಣ ಎಷ್ಟು ಎಲ್ಲಿಂದ ಬಂದಿದೆ, ಎಷ್ಟು ಬಳಕೆಯಾಗಿದೆ, ಉಳಿದಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.
ಡಾ.ಎ.ಹೆಚ್. ಶಿವಯೋಗಿಸ್ವಾಮಿ ಮಾತನಾಡಿ, ನಗರದಲ್ಲಿ ಸುರಿದ ಮಳೆಯಿಂದ ಅತಿವೃಷ್ಠಿಯುಂಟಾಗಿದ್ದು, ಇದಕ್ಕೆ ರಾಜ ಕಾಲುವೆ ಒತ್ತುವರಿ ಇದಕ್ಕೆ ಕಾರಣವಾಗಿದೆ. ರಾಜ ಕಾಲುವೆಯ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮಾಹಿತಿ ಕೇಳಿದರೆ, ಅವರು ತಹಸೀಲ್ದಾರ್ ಅವರಿಗೆ ಈ ಅರ್ಜಿ ಕಳುಹಿಸುತ್ತಾರೆ. ಅವರು ಈ ವಿಷಯದ ಬಗ್ಗೆ ತಮ್ಮಲ್ಲಿ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಹೀಗಾದರೆ ಹೇಗೆ? ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ಈಗ ಎದುರಾಗಿರುವ ಸಮಸ್ಯೆಯ ಬಗ್ಗೆ ಸರಿಯಾಗಿ ತಿಳಿದುಕೊಂಡು, ಯಾವುದೇ ರಾಜಿಕೀಯ ಮಾಡದೆ ಅವುಗಳಿಗೆ ಸ್ಪಂದಿಸಬೇಕಾಗಿದೆ. ಯುದ್ದೋಪಾದಿಯಲ್ಲಿ ಅಧಿಕಾರಿಗಳು ಸಿಬ್ಬಂದಿ ಕಾರ್ಯ ನಿರ್ವಹಿಸಬೇಕೆಂದರು.
ಜಿಪಂ ಅಧ್ಯಕ್ಷರ ಬದಲಾವಣೆ ವಿಷಯ ಪಕ್ಷದ ಆಂತರಿಕ ವಿಷಯವಾಗಿದ್ದು, ಇದನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಮಾಜಿ ಶಾಸಕ ಬಸವರಾಜ ನಾಯ್ಕ್, ಎಚ್.ಎಸ್. ನಾಗರಾಜ್, ಗೀತಾ ಗಂಗಾನಾಯ್ಕ್, ಮುಕುಂದಪ್ಪ, ಧನಂಜಯ್ ಕಡ್ಲೆಬಾಳ್, ಶಾಮನೂರು ಲಿಂಗರಾಜ್, ವಿ.ಎಸ್. ಜಗದೀಶ್, ಕೆ. ಸತೀಶ್, ಹನುಮಂತಪ್ಪ, ಸಂತೋಷ್, ಶ್ರೀನಿವಾಸ್, ಶಿವರಾಜ್ ಪಾಟೀಲ್ ಮತ್ತಿತರರು ಇದ್ದರು.







