ಹಿರಿಯರ ಸೇವೆ ಕುಟುಂಬದ ಕರ್ತವ್ಯ:ನ್ಯಾ.ಮನ್ಸೂರ್ ಅಹಮದ್ ಜಮಾನ್

ಮಂಡ್ಯ, ಅ.4: ಹಿರಿಯ ನಾಗರಿಕರ ಅಭಿವೃದ್ಧಿ ಪ್ರತಿಯೊಬ್ಬರ ಕರ್ತವ್ಯ. ಇವರ ಸೇವೆ ಮಾಡುವುದು ಆ ಕುಟುಂಬದ ಪ್ರತಿಯೊಬ್ಬ ಸದಸ್ಯನ ಹೊಣೆಯಾಗಿರುತ್ತದೆ. ಇದನ್ನು ಅರಿತು ಹಿರಿಯರನ್ನು ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಮೂರ್ತಿ ಮನ್ಸೂರ್ ಅಹಮದ್ ಜಮಾನ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಡ್ಯ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದಂತೆ ಹಿರಿಯ ನಾಗರಿಕರ ಕಡೆಗಣಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವಿಷಾದಿಸಿದ ಅವರು, ಸರಕಾರವು ಸಹ ಹಿರಿಯ ನಾಗರಿಕರಿಗೆ ಸಮಾಜಿಕ ಭದ್ರತೆ, ಸಾಮಾಜಿಕ ನ್ಯಾಯ ಸೇರಿದಂತೆ ಅನೇಕ ಅನುಕೂಲತೆಗಳನ್ನು ಕಲ್ಪಿಸಬೇಕು ಎಂದರು.
ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಕೋರ್ಟ್‍ಗೆ ಅಲೆಯುವ ಪರಿಸ್ಥಿತಿ ಇಲ್ಲ. ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದರೆ, ಅವರು ಸಂಬಂಧಪಟ್ಟವರಿಗೆ ನೊಟೀಸ್ ನೀಡಿ 90 ದಿನದಲ್ಲಿ ಸಮಸ್ಯೆ ಇತ್ಯರ್ಥಪಡಿಸಿಕೊಡುತ್ತಾರೆ. ಇದು ಅವರ ಜವಾಬ್ಧಾರಿಯಾಗಿದೆ ಎಂದು ಅವರು ಅವರು ಹೇಳಿದರು.
ಉಪವಿಭಾಗಾಧಿಕಾರಿಯವರಿಂದ ಸೂಕ್ತ ನ್ಯಾಯ ದೊರಕದಿದ್ದರೆ ಜಿಲ್ಲಾಧಿಕಾರಿಯವರಿಗೆ ಅಪೀಲು ಸಲ್ಲಿಸಬೇಕು. ಉಪವಿಭಾಗಾಧಿಕಾರಿಗಳು ಅಥವಾ ಜಿಲ್ಲಾಧಿಕಾರಿಯವರ ನ್ಯಾಯಾಲಯದಿಂದ ಹಿರಿಯ ನಾಗರಿಕರಿಗೆ ಸಂಬಂಧಪಟ್ಟ ಕುಟುಂಬದವರು ಇಂತಿಷ್ಟು ಜೀವನಾಂಶ ಕೊಡಬೇಕು ಎಂದು ತೀರ್ಪು ನೀಡಿದರೆ ಅವರು ಕಟ್ಟಲೇ ಬೇಕು. ಇಲ್ಲವಾದ ಪಕ್ಷದಲ್ಲಿ ಜೈಲು ಶಿಕ್ಷೆ ನೀಡಬಹುದು ಎಂದು ಅವರು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವøದ್ಧಿ ಇಲಾಖೆ ಉಪನಿರ್ದೇಶಕ ಡಾ.ಎಸ್.ದಿವಾಕರ್, ಜಿಲ್ಲಾ ವಿಕಲಚೇತನರ ಹಾಗು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಚ್.ಆರ್.ಸುರೇಶ್, ಮೀರಾಶಿವಲಿಂಗಯ್ಯ, ಇತರೆ ಗಣ್ಯರು ಉಪಸ್ಥಿತರಿದ್ದರು.







