ಚೀನಾ ಓಪನ್: ಶರಪೋವಾಗೆ ಹಾಲೆಪ್ ಶಾಕ್

ಬೀಜಿಂಗ್, ಅ.4: ಚೀನಾ ಓಪನ್ ಟೆನಿಸ್ ಟೂರ್ನಿಯ ಮೂರನೆ ಸುತ್ತಿನ ಪಂದ್ಯದಲ್ಲಿ ಸಿಮೊನಾ ಹಾಲೆಪ್ ರಶ್ಯದ ಆಟಗಾರ್ತಿ ಮರಿಯಾ ಶರಪೋವಾರನ್ನು ಸೋಲಿಸುವ ಮೂಲಕ ಶಾಕ್ ನೀಡಿದ್ದಾರೆ.
ರೋಮಾನಿಯದ ವಿಶ್ವದ ನಂ.2ನೆ ಆಟಗಾರ್ತಿ ಹಾಲೆಪ್ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ಮರಿಯಾ ಶರಪೋವಾರನ್ನು 6-2, 6-2 ನೇರ ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಪ್ರಸ್ತುತ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ 104ನೆ ಸ್ಥಾನದಲ್ಲಿರುವ ಶರಪೋವಾ ಎಪ್ರಿಲ್‌ನಲ್ಲಿ 15 ತಿಂಗಳ ನಿಷೇಧದ ಶಿಕ್ಷೆಯಿಂದ ಹೊರ ಬಂದ ಬಳಿಕ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಹಾಲೆಪ್ ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಶರಪೋವಾ ವಿರುದ್ಧ ಆಡಿರುವ ಕಳೆದ 7 ಪಂದ್ಯಗಳಲ್ಲಿ ಸೋತಿದ್ದರು. ಚೀನಾ ಓಪನ್‌ನಲ್ಲಿ 2ನೆ ಶ್ರೇಯಾಂಕದೊಂದಿಗೆ ಕಣಕ್ಕಿಳಿದಿರುವ ಹಾಲೆಪ್ ಕೊನೆಗೂ ಶರಪೋವಾ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ.
ವಿಶ್ವದ ನಂ.1 ಆಟಗಾರ್ತಿ ಗಾರ್ಬೈನ್ ಮುಗುರುಝ ಜ್ವರದಿಂದಾಗಿ ಮೊದಲ ಸುತ್ತಿನ ಪಂದ್ಯದಿಂದಲೇ ಹೊರ ನಡೆದಿದ್ದಾರೆ. ಈಹಿನ್ನೆಲೆಯಲ್ಲಿ 26ರ ಹರೆಯದ ಹಾಲೆಪ್ ಪ್ರಶಸ್ತಿ ಜಯಿಸುವ ಫೇವರಿಟ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.







