ಟ್ರಂಪ್‌ಗೆ ಬೆಂಬಲ ಘೋಷಿಸಿದ ಟಿಲರ್‌ಸನ್
ರಾಜೀನಾಮೆ ನೀಡುವ ವರದಿಗಳನ್ನು ನಿರಾಕರಿಸಿದ ಅಮೆರಿಕ ವಿದೇಶ ಕಾರ್ಯದರ್ಶಿ
.jpg)
ವಾಶಿಂಗ್ಟನ್, ಅ. 5: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಗೆ ಬೆಂಬಲವನ್ನು ಘೋಷಿಸಿದ್ದಾರೆ ಹಾಗೂ ತಾನು ರಾಜೀನಾಮೆ ನೀಡಲು ಬಯಸಿದ್ದೇನೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ.
ಈ ಮೊದಲು, ಟಿಲರ್‌ಸನ್ ಅಧ್ಯಕ್ಷರನ್ನು 'ದಡ್ಡ' ಎಂಬುದಾಗಿ ಬಣ್ಣಿಸಿದ್ದಾರೆ ಹಾಗೂ ಶೀಘ್ರವೇ ತನ್ನ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂಬುದಾಗಿ ವರದಿಯಾಗಿತ್ತು.
ಜುಲೈನಲ್ಲಿ ನಡೆದ ಬಾಯ್ ಸ್ಕೌಟ್ಸ್ ಆಫ್ ಅಮೆರಿಕನ್‌ನ ವಾರ್ಷಿಕ ಸಮಾವೇಶದಲ್ಲಿ ಟ್ರಂಪ್ ರಾಜಕೀಯ ಭಾಷಣ ಮಾಡಿದ ಬಳಿಕ ಈ ಇಬ್ಬರು ನಡುವೆ ಅಸಮಾಧಾನ ಹೊಗೆಯಾಡಿತ್ತು ಎಂದು ಹೇಳಲಾಗಿತ್ತು. ಒಂದು ಕಾಲದಲ್ಲಿ ಟಿಲರ್‌ಸನ್ ಈ ಸಂಸ್ಥೆಯ ಮುಖ್ಯಸ್ಥರಾಗಿದ್ದರು.
ಈ ಹಿನ್ನೆಲೆಯಲ್ಲಿ ವಿದೇಶ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ಟಿಲರ್‌ಸನ್ ಮುಂದಾಗಿದ್ದಾರೆ ಎಂಬುದಾಗಿ ಎನ್‌ಬಿಸಿ ನ್ಯೂಸ್ ಬುಧವಾರ ವರದಿ ಮಾಡಿತ್ತು.
''ಅಧ್ಯಕ್ಷರು ಮತ್ತು ದೇಶದ ಯಶಸ್ಸಿಗೆ ನನ್ನ ಬದ್ಧತೆ ವಿದೇಶ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವಂತೆ ಅವರು ನನಗೆ ನೀಡಿದ ಆಹ್ವಾನವನ್ನು ಒಪ್ಪಿಕೊಂಡ ದಿನದಷ್ಟೇ ಪ್ರಬಲವಾಗಿದೆ'' ಎಂದು ಟಿಲರ್‌ಸನ್ ಹೇಳಿದರು.
''ಹುದ್ದೆಯನ್ನು ತೊರೆಯಬೇಕೆಂಬ ಯೋಚನೆ ನನ್ನ ಮನಸ್ಸಿಗೆ ಒಂದು ದಿನವೂ ಬಂದಿಲ್ಲ. ಅಧ್ಯಕ್ಷರು ನನ್ನನ್ನು ನೇಮಕಗೊಳಿಸಿರುವುದಕ್ಕಾಗಿ ನಾನಿಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಅವರ ಗುರಿಗಳನ್ನು ಸಾಧಿಸಲು ನಾನು ಉಪಯುಕ್ತ ಎಂಬುದಾಗಿ ಅವರು ಭಾವಿಸುವವರೆಗೆ ನಾನಿಲ್ಲಿ ಇರುತ್ತೇನೆ'' ಎಂದರು.







