ಮೈಸೂರಿನ ಕೋ-ಆಪರೇಟಿವ್ ಸೊಸೈಟಿಯಿಂದ ವಂಚನೆ: ದೂರು
ಉಡುಪಿ, ಅ.5: ಉಡುಪಿಯಲ್ಲಿ ಶಾಖೆಯನ್ನು ಹೊಂದಿರುವ ಮೈಸೂರಿನ ಸೊಸೈಟಿಯೊಂದು ಗ್ರಾಹಕರಿಗೆ ಕೋಟ್ಯಾಂತರ ರೂ.ಗಳನ್ನು ವಂಚಿಸಿದೆ ಎಂದು ಉಡುಪಿಯ ಮೂವರು ಗ್ರಾಹಕರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಅಂಬಲಪಾಡಿ ಪ್ರಭು ಕಂಪೌಂಡ್‌ನ ಸುಂದರ ಕೋಟ್ಯಾನ್, ಉಡುಪಿ ಸಂತೆಕಟ್ಟೆಯ ಹರೀಶ್ ಸಾಮಗ ಹಾಗೂ ಉಪ್ಪೂರು ತೆಂಕಬೆಟ್ಟಿನ ಸುದಾಕರ ಸಾಲ್ಯಾನ್ ವಂಚನೆಯ ಕುರಿತಂತೆ, ಸೊಸೈಟಿಯ 17 ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂಸ್ಥೆಗೆ ಸಂಬಂಧಪಟ್ಟ ಮೈಸೂರಿನ ಲೋಕೇಶ್ ಎಸ್., ಮಂಡ್ಯದ ಸುರೇಶ್ ಕೆ., ರಾಜೇಗೌಡ, ಬೆಂಗಲೂರಿನ ತಿಮ್ಮಯ್ಯ ಎಚ್.ಕೆ., ಉತ್ತರ ಕನ್ನಡದ ಕೃಷ್ಯ ಸತ್ಯನಾರಾಯಣ ನಾಯ್ಕ, ವಿಷ್ಣು ಭಟ್, ಹಾಸನದ ಸುಬ್ರಹ್ಮಣ್ಯ, ಮೈಸೂರಿನ ದಿಲೀಪ್, ರಾಮನಗರದ ನಾರಾಯಣ, ಬೆಂಗಳೂರಿನ ರಾಜನಾಯಕ್, ಹರೀಶಯ್ಯ, ಮಂಗಳೂರಿನ ಗಂಗಾಧರ ಆಚಾರ್, ಬೆಳಗಾವಿಯ ನಿಂಗರಾಜು, ಧನಲಕ್ಷಿ ಕೆ.ವಿ. ಹಾಸನ, ದಾವಣಗೆರೆಯ ಅಪರ್ಣಾ ನರಸಿಂಹ, ಹಾವೇರಿಯ ವಸಂತ ಜೋಶಿ ಹಾಗೂ ಶಿವಮೊಗ್ಗದ ಲೋಕೇಶ್ ಎಚ್.ಆರ್. ದೂರಿನಲ್ಲಿ ಉಲ್ಲೇಖಿಸಿರುವ ಆರೋಪಿಗಳಾಗಿದ್ದಾರೆ.
ಆರೋಪಿ ಲೋಕೇಶ್ ಎಸ್. ಆವಿಷ್ಕಾರ್ ಜೀವನ್ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ಮೈಸೂರು ಸಂಸ್ಥೆಯ ಶಾಖೆಯೊಂದನ್ನು ಉಡುಪಿಯಲ್ಲಿ ಪ್ರಾರಂಭಿಸಿದ್ದು, ಶಾಖೆಯನ್ನು ಬಲಪಡಿಸಲು ಬಂಡವಾಳದ ಬಗ್ಗೆ ಸದಸ್ಯರನ್ನು ಹಾಗೂ ಠೇವಣಿದಾರರನ್ನು ಮಾಡಿಕೊಡುವಂತೆ ಅಲ್ಲದೇ ಆಕರ್ಷಕ ಡಿವಿಡೆಂಟ್, ಬಡ್ಡಿದರ ನೀಡುವುದಾಗಿ ಹೇಳಿ ಸಾರ್ವಜನಿಕರನ್ನು ಸಂಸ್ಥೆಯ ಸದಸ್ಯರಾಗಿ ಪರಿಚಯ ಮಾಡಿಕೊಂಡಿದ್ದರು. ತಾವೆಲ್ಲ ಬಂಡವಾಳವಾಗಿ 10,000 ರೂ. ಪಾವತಿಸಿದ್ದು, ಹೀಗೆ ಸಾರ್ವಜನಿಕರಿಂದ ಮೂರು ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಸಂಗ್ರಹಿಸಲಾಗಿದೆ ಎಂದು ದೂರುದಾರರು ದೂರಿನಲ್ಲಿ ಆರೋಪಿಸಿದ್ದಾರೆ.
ಸಂಸ್ಥೆಯಲ್ಲಿ ಇಟ್ಟ ಠೇವಣಿಯ ಅವಧಿ ಮುಗಿದರೂ, ಬಡ್ಡಿಯನ್ನಾಗಲೀ, ಡಿವಿಡೆಂಟ್ ಹಾಗೂ ಇಟ್ಟ ಠೇವಣಿಯನ್ನೂ ನೀಡದೇ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕೇಳಿದರೆ ಬೇರೆ ಬೇರೆ ಕಾರಣಗಳನ್ನು ಹೇಳುತಿದ್ದರು. ಕೊನೆಗೆ ತಾವು ಹಲವರು ಸೇರಿ ಉಡುಪಿಯ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಗೂ ಗ್ರಾಹಕ ವ್ಯಾಜ್ಯ ನ್ಯಾಯಾಲಯದಲ್ಲಿ ದಾವೆ ಹೂಡಿರುವುದಾಗಿ ದೂರುದಾರರು ತಿಳಿಸಿದ್ದಾರೆ. ಇದಕ್ಕಾಗಿ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆರೋಪಿಗಳು ತಮಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಈ ನಡುವೆ ಆರೋಪಿಗಳೆಲ್ಲ ಸೇರಿಕೊಂಡು ಅಕ್ರಮ ರೀತಿಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಉಡುಪಿ ಶಾಖೆಯ ಅವಿಷ್ಕಾರ್ ಜೀವನ್ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ಎನ್ನುವ ಸಂಸ್ಥೆಯನ್ನು ಮುಚ್ಚಿ, ಅದೇ ಮಾದರಿಯ ಹೆಸರು, ವಿನ್ಯಾಸ ಬದಲಿಸಿ ಸಾಯಿ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದನ್ನು ವಿಚಾರಿಸಿದಾಗಲೂ ತಮಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.







