ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ರಾಷ್ಟ್ರಪತಿಗೆ ಒತ್ತಾಯ : ಲಕ್ಷ್ಮೀ ಆರ್.ಹೆಬ್ಬಾಳ್ಕರ್

ಬೆಂಗಳೂರು, ಅ.5: ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕೆಪಿಸಿಸಿ ಮಹಿಳಾ ಕಾರ್ಯಕಾರಣಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ಮಹಿಳಾ ಮೀಸಲಾತಿಗಾಗಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಂಧೋಲನ ಮಾಡಲಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ರಾಷ್ಟ್ರಪತಿಯನ್ನು ಭೇಟಿ ಮಾಡಿ ಸಹಿ ಸಂಗ್ರಹವನ್ನು ಅವರಿಗೆ ನೀಡಿ ಮಹಿಳಾ ಮೀಸಲಾತಿಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
2018ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಚುನಾವಣೆ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮಹಿಳೆಯರ ಅರಿವನ್ನು ಹೆಚ್ಚಿಸುವುದಕ್ಕಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕೇಂದ್ರದ ವಿರುದ್ಧ ಬೀದಿ ನಾಟಕ: ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗೂ ಬೆಲೆ ಏರಿಕೆಯಿಂದಾಗಿ ಮಹಿಳಾ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕಗಳನ್ನು ಮಾಡುತ್ತಿದ್ದೇವೆ. ಹಾಗೂ ಇಂದಿರಾ ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಮಹಿಳಾ ಕಾಂಗ್ರೆಸ್ ವತಿಯಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅರಿಸಿನ-ಕುಂಕುಮ ಕಾರ್ಯಕ್ರಮವನ್ನು ನವರಾತ್ರಿಯಿಂದ ಪ್ರಾರಂಭಿಸಲಾಗಿದೆ. ಈಗಾಗಲೇ 15ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಈ ತಿಂಗಳ ಅಂತ್ಯದ ಒಳಗೆ ಮುಗಿಸಲಾಗುವುದು. ಇಂದಿರಾ ಗಾಂಧಿಯ 100ನೆ ಜನ್ಮ ದಿನಾಚರಣೆ ಅಂಗವಾಗಿ ಇಂದಿರಾ ನಮನ ಕಾರ್ಯಕ್ರಮವನ್ನು ಮುಂದಿನ ನವೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಕೆಪಿಸಿಸಿ ಮಹಿಳಾ ಕಾರ್ಯಕಾರಿಣಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧು ಗೌಡ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಮಹಿಳಾ ಅಧ್ಯಕ್ಷರು ಉಪಸ್ಥಿತರಿದ್ದರು.







