ಹೂಡೆ ಕಾಂಕ್ರೀಟ್ ರಸ್ತೆಯ ಸುರಕ್ಷಾ ತಡೆಗೋಡೆ ಧ್ವಂಸ ಆರೋಪದ ಬಗ್ಗೆ ಪಂಚಾಯತ್ ಅಧ್ಯಕ್ಷೆಯ ಸ್ಪಷ್ಟೀಕರಣ

ಉಡುಪಿ, ಅ.5: ಕೆಮ್ಮಣ್ಣು ಗ್ರಾ.ಪಂ. ವ್ಯಾಪ್ತಿಯ ಹೂಡೆಯ ಲೋಕೋಪಯೋಗಿ ಇಲಾಖೆಯ ಕಾಂಕ್ರೀಟ್ ರಸ್ತೆಗೆ ನಿರ್ಮಿಸಲಾಗಿರುವ ಸುರಕ್ಷ ತಡೆಗೋಡೆ ಯನ್ನು ಕೆಡವಿರುವ ಸುದ್ದಿಯ ಬಗ್ಗೆ ತೊನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫೌಝಿಯ ಸಾದಿಕ್ ಸ್ಪಷ್ಟನೆ ನೀಡಿದ್ದಾರೆ.
ಅವರ ಹೇಳಿಕೆ ಇಲ್ಲಿದೆ
ತೊನ್ಸೆ ಗ್ರಾಮ ಪಂಚಾಯತ್‍ನ ಹೂಡೆ ಲೋಕೋಪಯೋಗಿ ರಸ್ತೆಯನ್ನು ಸಚಿವ ಪ್ರಮೋದ್ ಮಧ್ವರಾಜ್ ಅವರು ವಿಶೇಷ ಮುತುವರ್ಜಿ ವಹಿಸಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿರುತ್ತಾರೆ. ಈ ರಸ್ತೆಯ ತೆಪ್ಪತೋಡಿನ ಬಳಿಯ ಅಪಾಯಕಾರಿ ತಿರುವಿನಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಗ್ರಾಮ ಪಂಚಾಯತ್ ಹಾಗೂ ಪಂಚಾಯತ್ ವ್ಯಾಪ್ತಿಯ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದ್ದು, ಗ್ರಾ.ಪಂ. ಕೂಡ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದೆ. ಸಚಿವರು ಸಂಬಂಧಪಟ್ಟ ಇಲಾಖೆಗೆ ಆದಷ್ಟು ಬೇಗ ಸ್ಥಳ ಪರಿಶೀಲಿಸಿ ಕಾಮಗಾರಿ ಪ್ರಾರಂಭಿಸಬೇಕೆಂದು ಸೂಚಿಸಿದ್ದಾರೆ.
ಸೆ.6 ರಂದು ನಡೆದ ಪಂಚಾಯತ್‍ನ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಈ ಸ್ಥಳದಲ್ಲಿ ದಾನಿಗಳ ಸಹಕಾರದಿಂದ ಸುರಕ್ಷಾ ತಡೆಗೋಡೆ ನಿರ್ಮಿಸುವ ಬಗ್ಗೆ ಪ್ರಸ್ತಾವಿಸಿದಾಗ ಲೋಕೋಪಯೋಗಿ ರಸ್ತೆಯಾಗಿರುವುದರಿಂದ ಸ್ಥಳ ಪರಿಶೀಲನೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.
ಆದರೆ ಅ.4ರಂದು ಬೆಳಗ್ಗೆ ಕರೆ ಮಾಡಿ ಸುರಕ್ಷಾ ತಡೆ ಗೋಡೆಯ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಸದಸ್ಯರು ತಿಳಿಸಿದ್ದರು. ಆದರೆ ಕಾಂಕ್ರೀಟ್ ರಸ್ತೆಯ ಮೇಲೆಯೇ ತಡೆಗೋಡೆ ನಿರ್ಮಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತದೆ. ಅಪಾಯಕಾರಿಯಾದ ತಿರುವಿನಲ್ಲಿ ಈ ಕಾಮಗಾರಿಯಿಂದ ರಕ್ಷಣೆಯಾಗುವುದಕ್ಕಿಂತ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ತಡೆಗೋಡೆಯನ್ನು ತೆರವುಗೊಳಿಸಬೇಕೆಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸದಸ್ಯರಿಗೆ ಬೆಳಗ್ಗೆ 8:30ಕ್ಕೆ ಕಾಮಗಾರಿಯ ಪರಿಶೀಲನೆ ಮಾಡುವ ಬಗ್ಗೆ ತಿಳಿಸಲಾಗಿತ್ತು.
ಆದರೆ ನಾವು ಸ್ಥಳಕ್ಕೆ ಬರುವಾಗ ತಡೆಗೊಡೆ ತೆರವಾಗಿತ್ತು. ನಂತರ ಈ ಬಗ್ಗೆ ಪಂಚಾಯತ್‍ನಲ್ಲಿ ಚರ್ಚೆಯಾಗಿದ್ದು, ಜಿಲ್ಲಾ ವರಿಷ್ಟಾಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿನ ಪೊಲೀಸ್ ಠಾಣೆಗೆ ಸಂಬಂಧಪಟ್ಟವರನ್ನು ಕರೆಸಿ, ಮಾತುಕತೆಯನ್ನು ನಡೆಸಿ ವಿಷಯವನ್ನು ಉತ್ತಮ ರೀತಿಯಲ್ಲಿ ಮುಕ್ತಾಯ ಮಾಡಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಸ್ಥಳದಲ್ಲಿ ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯಿಂದಲೇ ಸುರಕ್ಷಾ ತಡೆಗೊಡೆ ನಿರ್ಮಿಸಲು ಸಚಿವರಿಗೆ ಮನವಿ ಮಾಡಿ ಆದಷ್ಟು ಬೇಗ ಕಾಮಗಾರಿಯನ್ನು ನಡೆಸುತ್ತೇವೆ ಎಂದು ತೊನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫೌಝಿಯ ಸಾದಿಕ್ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.







