ಉತ್ತಮ ಆಹಾರ ಕುರಿತ ತಿಳುವಳಿಕೆ ಅಗತ್ಯ: ಪ್ರೊ.ಡಾ.ಗೀತಾ ಸಂತೋಷ್
ಬೆಂಗಳೂರು, ಅ.5: ಆರೋಗ್ಯಕ್ಕೆ ಮಾರಕ ಹಾಗೂ ಪೂರಕವಾದ ಆಹಾರಗಳ ಕುರಿತ ಮಾಹಿತಿಯ ಕೊರತೆಯಿಂದಾಗಿ ಬಹುತೇಕ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಮೌಂಟ್ ಕಾರ್ಮಲ್ ಕಾಲೇಜಿನ ನ್ಯೂಟ್ರಿಷನ್ ಅಂಡ್ ಡಯಾಟೆಟಿಕ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊ.ಡಾ.ಗೀತಾ ಸಂತೋಷ್ ವಿಷಾಧಿಸಿದ್ದಾರೆ.
ಇಂಡಿಯನ್ ಡಯಾಟೆಟಿಕ್ ಅಸೋಸಿಯೇಷನ್ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಆರೋಗ್ಯಕರ ಕುರುಕುಲು ತಿಂಡಿಗಳ ಆಯ್ಕೆಯ ‘ದಿ ಹೆಲ್ತ್ ಸ್ವಾಪ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಅನ್ವಯ ಶೇ.67ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಕುರುಕುಲು ತಿಂಡಿ ಸೇವಿಸುತ್ತಿದ್ದಾರೆ. ಮತ್ತು ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಕುರುಕುಲು ತಿಂಡಿ ಸೇವಿಸುತ್ತಿದ್ದಾರೆ. ಹೀಗಾಗಿ ಕುರುಕುಲು ತಿಂಡಿಗಳಲ್ಲಿ ಯಾವುದು ಆರೋಗ್ಯಕ್ಕೆ ಪೂರಕ ಹಾಗೂ ಮಾರಕ ಎನ್ನುವುದರ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.
ವೇಗದ ಜೀವನದಲ್ಲಿ ಕೆಲವೊಮ್ಮೆ ಆಹಾರವನ್ನು ತಯಾರಿಸುವುದು ತಡವಾಗಬಹುದು. ಈ ಸಂದರ್ಭದಲ್ಲಿ ಆರೋಗ್ಯಕರ ಕುರುಕುಲು ನಿಮ್ಮ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಕುರುಕುಲು ತಿನಿಸಲ್ಲಿ ಸರಿಯಾದ ಪ್ರಮಾಣದ ಪೋಷಕಾಂಶಗಳಾದ ಕಾರ್ಬೊಹೈಡ್ರೇಟ್‌ಗಳು, ಪ್ರೋಟೀನ್, ವಿಟಮಿನ್‌ಗಳು ಮತ್ತು ಮಿನರಲ್‌ಗಳಿವೆ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಮುಖ್ಯವೆಂದು ಅವರು ಸಲಹೆ ನೀಡಿದರು.
ನ್ಯೂಟ್ರಿಷನ್ ತಜ್ಞೆ ಶೀಲಾ ಕೃಷ್ಣಸ್ವಾಮಿ ಮಾತನಾಡಿ, ಆರೋಗ್ಯಕರವಾದ ಆಹಾರ ಸೇವಿಸುದಕ್ಕೆ ವ್ಯವಸ್ಥೆಯಿದ್ದರೂ ತಿಳುವಳಿಕೆಯ ಕೊರತೆಯಿಂದಾಗಿ ಅನಾರೋಗ್ಯಕರ ಆಹಾರಕ್ಕೆ ಮಾರು ಹೋಗುತ್ತಿದ್ದೇವೆ. ಕೆಲವೊಮ್ಮೆ ಆಯ್ಕೆಯ ಅವಕಾಶವಿಲ್ಲದೆ ಅನಾರೋಗ್ಯಕರ ಆಹಾರ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಬದಲಾಗಿ ಸಾಮಾನ್ಯ ಆಹಾರದ ಜೊತೆಗೆ ಮೊಳಕೆಕಾಳು, ತಾಜಾ ಹಣ್ಣುಗಳನ್ನು ಸೇವೆಸಿದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಪೋಲೋ ಆಸ್ಪತ್ರೆಗಳ ಸಮೂಹದ ಮುಖ್ಯಸ್ಥೆ ಡಾ.ಪ್ರಿಯಾಂಕಾ ರೋಹಟಗಿ ಭಾರತೀಯರಿಗೆ ರುಚಿಕರ, ಪೋಷಕಾಂಶ ಶಕ್ತಿಯುಳ್ಳ ಆರೋಗ್ಯಕರ ಆಯ್ಕೆಗಳ ಮೂಲಕ ಅನಾರೋಗ್ಯಕರ ಆಯ್ಕೆಗಳನ್ನು ನಿವಾರಿಸುವ ಉಪಕ್ರಮಕ್ಕೆ ಚಾಲನೆ ನೀಡಿದರು.







