ನಾಯಕ ಸಮುದಾಯಕ್ಕೆ ನಮ್ಮ ಕೊಡುಗೆ ಅಪಾರ: ಎಚ್.ಡಿ.ದೇವೇಗೌಡ
ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ

ಬೆಂಗಳೂರು, ಅ.5:ರಾಜ್ಯದ ನಾಯಕ, ಉಪ್ಪಾರ ಸಮುದಾಯಕ್ಕೆ ಜೆಡಿಎಸ್ ಪಕ್ಷವೂ ಅಪಾರ ಕೊಡುಗೆ ನೀಡಿದ್ದು, ಇದನ್ನು ಸ್ಮರಿಸಿಕೊಳ್ಳುವವರು ಕಡಿಮೆ ಆಗುತ್ತಿದ್ದಾರೆ ಎಂದು ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಶೇಷಾದ್ರಿಪುರಂನ ಜೆಡಿಎಸ್ ಪ್ರಧಾನ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಕಾಲದಿಂದ ನಾಯಕ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂಬ ಹೋರಾಟ ನಡೆಯುತ್ತಿತ್ತು.
ಆದರೆ, ನನ್ನ ಶ್ರಮದಿಂದ ಅಂದಿನ ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ನಾಯಕ, ಉಪ್ಪಾರ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಮಾಡಿದರು. ಇದೀಗ ಈ ಸಮುದಾಯದ ಸಾಕಷ್ಟು ಮಂದಿ ಉತ್ತಮ ಸ್ಥಾನದಲ್ಲಿದ್ದು, ರಾಜಕೀಯವಾಗಿಯೂ ಸಮರ್ಥರಾಗಿದ್ದಾರೆ. ಆದರೆ, ನಾವು ಮಾಡಿದ ಕೆಲಸವನ್ನು ಇವತ್ತು ಸ್ಮರಿಸಿಕೊಳ್ಳುವವರು ಕಡಿಮೆ ಎಂದು ದೇವೇಗೌಡ ನುಡಿದರು.
ವಾಲ್ಮೀಕಿ ಸಮುದಾಯಕ್ಕೆ ನಾನು ಮತ್ತು ಕುಮಾರಸ್ವಾಮಿ ಸಾಕಷ್ಟು ಕೆಲಸ ಮಾಡಿದ್ದೇವೆ.ಅಲ್ಲದೆ, ಕುಮಾರ ಸ್ವಾಮಿ ರಾಜಕೀಯಕ್ಕೆ ಬರುವ ಮುನ್ನವೇ, ಈ ಸಮುದಾಯಕ್ಕೆ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ರಾಜ್ಯ ಸರಕಾರ ಜಾಗ ನೀಡಿರುವುದು ಔದಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಅದ್ದೂರಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಪ್ರತಿಪಕ್ಷ ದವರನ್ನು ಆಹ್ವಾನಿಸದಿರುವುದಕ್ಕೂ ಸಂತೋಷ ಎಂದು ದೇವೇಗೌಡರು ವ್ಯಂಗ್ಯವಾಡಿದರು.
ನಕಲಿ ಪ್ರಮಾಣ ಪತ್ರ: ಅನೇಕರು ರಾಜಕೀಯ ಲಾಭಕ್ಕಾಗಿ ನಾಯಕ ಸಮುದಾಯ ಎಂದು ನಕಲಿ ಜಾತಿ ಪ್ರಮಾಣ ಮಾಡಿಸಿಕೊಂಡಿದ್ದಾರೆ.ಇದಕ್ಕೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡ ಇದೆ.ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಜೆಡಿಎಸ್ ಎಸ್‌ಟಿ ವಿಭಾಗದ ರಾಜ್ಯಾಧ್ಯಕ್ಷ ಹೊದಿಗೆರೆ ರಮೇಶ್ ಗಂಭೀರ ಆರೋಪ ಮಾಡಿದರು.
ಹರಿಹರದ ಬಳಿ ವಾಲ್ಮೀಕಿ ಗುರುಪೀಠ ಸ್ಥಾಪನೆಗೆ ಕುಮಾರಸ್ವಾಮಿ ಅವರು ರಾಜಕೀಯ ಪ್ರವೇಶಕ್ಕೂ ಮುನ್ನವೇ 8ರಿಂದ 10 ಎಕರೆ ಜಾಗ ಸೇರಿದಂತೆ ನಾನಾ ಸೌಲಭ್ಯಗಳನ್ನು ದೇವೇಗೌಡರು ನಾಯಕ ಜನಾಂಗಕ್ಕೆ ಕೊಡುಗೆ ನೀಡಿದ್ದಾರೆ. ಇದನ್ನು ಸ್ಮರಿಸಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಅನಂತಯ್ಯ, ಅಶೋಕ್ ಕುಮಾರ್, ಬಿ.ಕಾಂತರಾಜ್, ಉಪಾಧ್ಯಕ್ಷ ಶಫೀವುಲ್ಲಾ, ಬೆಂಗಳೂರು ಘಟಕದ ಅಧ್ಯಕ್ಷ ಪ್ರಕಾಶ್,ಬಿಬಿಎಂಪಿ ಮಾಜಿ ಉಪ ಮೇಯರ್ ಪದ್ಮಾವತಿ ಸೇರಿ ಪ್ರಮುಖರು ಹಾಜರಿದ್ದರು.







