ಕಾಂಗ್ರೆಸ್ಸಿಗರಿಗೆ ಕೆಎಫ್‌ಡಿ, ಪಿಎಫ್‌ಐ ಜೊತೆ ಸ್ನೇಹ: ಶೋಭಾ ಆರೋಪ
ಸಚಿವ ಖಾದರ್ ಹೇಳಿಕೆಗೆ ಆಕ್ರೋಶ
ಉಡುಪಿ, ಅ.5: ಬಿಜೆಪಿಗೆ ಪಿಎಫ್‌ಐ ಜೊತೆ ಸಂಬಂಧವಿದೆ ಎಂಬ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕೆಎಫ್‌ಡಿ ಹಾಗೂ ಪಿಎಫ್‌ಐ ಜೊತೆ ಯಾರಿಗಾದರೂ ನಿಕಟ ಸಂಪರ್ಕ ಇದ್ದರೆ ಅದು ಕಾಂಗ್ರೆಸ್ ಮುಖಂಡರಿಗೆ ಮಾತ್ರ ಎಂದು ಆರೋಪಿಸಿದ್ದಾರೆ.
ಗುರುವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ ಹೋರಾಟವನ್ನು ದಾರಿ ತಪ್ಪಿಸುವ ಕೆಲಸವನ್ನು ಸಚಿವ ಖಾದರ್ ಮಾಡುತ್ತಿದ್ದು, ಇದಕ್ಕಾಗಿ ಅವರು ಬಿಜೆಪಿಯ ಕ್ಷಮೆ ಯಾಚಿಸಬೇಕು ಎಂದರು. ಕೆಎಫ್‌ಡಿ ಮೇಲಿನ ಕೇಸು ಹಿಂಪಡೆದಿದ್ದು ಕಾಂಗ್ರೆಸ್ ಸರಕಾರ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಐಸಿಸ್ ಚಟುವಟಿಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಕಚೇರಿಯೊಂದು ಮಂಗಳೂರಿನಲ್ಲಿ ಸ್ಥಾಪನೆಯಾಗಬೇಕು. ಈ ಬಗ್ಗೆ ಎರಡು ತಿಂಗಳ ಹಿಂದೆಯೇ ತಾವು ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸುವ ಕುರಿತು ಬಂದಿರುವ ವರದಿಗೆ ಪ್ರತಿಕ್ರಿಯಿಸಿದ ಶೋಭಾ, ಸರಿಯಾಗಿ ಲೆಕ್ಕ ಪತ್ರ ಇಟ್ಟುಕೊಳ್ಳದ ವ್ಯಕ್ತಿ, ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಳೆದ 70 ವರ್ಷಗಳಿಂದ ಇಂತಹ ದಾಳಿ ನಡೆಸಿದೆ. ಕರ್ನಾಟಕದಲ್ಲೂ ಕೂಡ ಸಹಜವಾಗಿ ಇದು ಆದರೆ ಕರ್ನಾಟಕದ ಸರಕಾರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ಐಟಿ ಅಧಿಕಾರಿಗಳ ಮೇಲೆ ಎಸಿಬಿಯ ಮೂಲಕ ದಾಳಿ ನಡೆಸುವ ಹುನ್ನಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂಗೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಹೇಳಿದ ಅವರು, ಈ ಕಾಂಗ್ರೆಸ್ ಸರಕಾರಕ್ಕೆ ಉಳಿಗಾಲವಿಲ್ಲ. ಇದಕ್ಕಾಗಿ ರಾಜ್ಯದ ಐಟಿ ಅಧಿಕಾರಿಗಳು ಭಯಪಡಬೇಕಾಗಿಲ್ಲ. ಐಟಿಯ ಮೇಲೆ ಸಂಶಯವಿದ್ದರೆ ಸಿಬಿಐಗೆ ದೂರು ನೀಡಲಿ. ರಾಜ್ಯ ಸರಕಾರ ತನ್ನ ಪರಿಮಿತಿ ಮೀರಿ ಅಧಿಕಾರ ಚಲಾಯಿಸಲು ಹೊರ ಟಿದೆ. ಇದು ಭಂಡ ಸರಕಾರ ಎಂಬುದು ಸಾಬೀತಾಗಿದೆ. ರಾಜ್ಯದಲ್ಲಿ ಅಧಿಕಾರಿಗಳ ದುರ್ಬಳಕೆಯಾಗುತ್ತಿದೆ ಎಂದರು.
ಉಡುಪಿ ಜಿಲ್ಲೆಯ ಮಲ್ಪೆ-ಮಣಿಪಾಲ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ಎ (ಮಲ್ಪೆ-ತೀರ್ಥಹಳ್ಳಿ ರಾ.ಷ್ಟ್ರೀಯ ಹೆದ್ದಾರಿ)ಯ ಅಗಲೀಕರಣ ಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಸ್ತುತ ಸಂಪೂರ್ಣ ಕೆಟ್ಟು ಹೋಗಿರುವ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಪರ್ಕಳ ಬಿ.ಇ.ಎಂ. ಶಾಲೆಯವರೆಗಿನ ಭಾಗದ ತುರ್ತು ದುರಸ್ತಿ ಕಾರ್ಯವನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಅನುದಾನವನ್ನು ಹೊಂದಿಸಿಕೊಂಡು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಈ ಬಗ್ಗೆ ತಾನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದು, ದುರಸ್ತಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿರುವುದಾಗಿ ತಿಳಿಸಿದರು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ದುರಸ್ತಿ ಕಾರ್ಯ ವಿಳಂಬವಾಗಿದೆ. ಒಂದೆರಡು ದಿನದೊಳಗೆ ಕೆಲಸ ಆರಂಭಗೊಳ್ಳಲಿದೆ ಎಂದರು.







