ಕವಿ, ಮಹರ್ಷಿಗಳ ಪರಂಪರೆಯಲ್ಲಿ ವಾಲ್ಮೀಕಿ ಶ್ರೇಷ್ಠರು: ಶೀಲಾ ಶೆಟ್ಟಿ

ಉಡುಪಿ, ಅ.5: ‘ರಾಮಾಯಣ’ ಆದಿಕಾವ್ಯವನ್ನು ರಚಿಸಿದ ವಾಲ್ಮೀಕಿ, ದೇಶದ ಕವಿ ಹಾಗೂ ಮಹರ್ಷಿಗಳ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠರು ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಗಳ ಸಹಯೋಗದಲ್ಲಿ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವ್ಯಾಧನಾಗಿ ಅಹಿಂಸೆಯಲ್ಲಿ ತೊಡಗಿದ್ದ ವಾಲ್ಮೀಕಿ, ನಾರದ ಮಹರ್ಷಿಗಳ ಸೂಚನೆಯಂತೆ ರಾಮಧ್ಯಾನ ಮಾಡಿ ಮಹರ್ಷಿಯಾದರು. ಬೇಡನೊಬ್ಬನ ಬಾಣದಿಂದ ಕ್ರೌಂಚ ಪಕ್ಷಿಗಳ ಮರಣವನ್ನು ಕಂಡ ಮರುಗಿದ ಅವರ ಕರುಣೆಯ ಹೃದಯ ರಾಮಯಣ ಕಾವ್ಯ ಬರೆಯಲು ಸ್ಪೂರ್ತಿಯಾಯಿತು ಎಂದರು.
ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥವು ವಿಶ್ವಮಾನ್ಯವಾದುದು. ಭಾರತ ಮಾತ್ರವಲ್ಲದೇ ಅನೇಕ ದೇಶಗಳಲ್ಲಿ ಇಂದಿಗೂ ರಾಮಾಯಣದ ಅನುಕರಣೆ ನಡೆಯುತ್ತಿದೆ. ರಾಮಾಯಣದ ಎಲ್ಲಾ ಮಹಾಪುರುಷರು ಸಮಾಜಕ್ಕೆ ಸದಾ ಆದರ್ಶಪ್ರಾಯರು. ರಾಮಾಯಣ ಕಾವ್ಯದಲ್ಲಿ ತಿಳಿಸಿದಂತೆ ಪ್ರತಿಯೊಬ್ಬರೂ ನ್ಯಾಯಮಾರ್ಗದಲ್ಲಿ ನಡೆಯಬೇಕು. ಬೇಡ ಜನಾಂಗದ ವಾಲ್ಮೀಕಿ ತಮ್ಮ ಛಲ ಮತ್ತು ಧಾರಣ ಶಕ್ತಿಯಿಂದ ಮಹಾನ್ ವ್ಯಕ್ತಿಯಾಗಿ ರೂಪುಗೊಂಡಿದ್ದು ಎಲ್ಲರಿಗೂ ಮಾದರಿಯಾಗಬೇಕು ಎಂದು ಶೀಲಾ ಶೆಟ್ಟಿ ಹೇಳಿದರು.
ಮಹರ್ಷಿ ವಾಲ್ಮೀಕಿ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿ, ವಾಲ್ಮೀಕಿ ವಿಶ್ವಮಾನವ ರಾಗಿದ್ದರು. ಅವರು ಸಮಾಜ ಸುಧಾರಕ, ಶಿಕ್ಷಣ ತಜ್ಞ, ಪರಿಸರ ಪ್ರೇಮಿ, ಶೋಷಿತರ ಪರ ಕವಿಯಾಗಿದ್ದರು. ಅವರ ರಚನೆಯ ರಾಮಾಯಣದಲ್ಲಿ ಭಾತೃತ್ವ, ಸಾಮಾಜಿಕ ನ್ಯಾಯ , ಮಾನವೀಯ ಧರ್ಮ 21 ನೆ ಶತಮಾನಕ್ಕೂ ಪ್ರಸ್ತುತವಾಗಿದೆ. ಅದರ ಪ್ರತಿಯೊಂದು ಪಾತ್ರಗಳಿಗೂ ಅದರದೇ ಆದ ಶ್ರೀಮಂತಿಕೆಯಿದೆ. ರಾಮಾಯಣದ ಮಹಾನ್ ವ್ಯಕ್ತಿಗಳು ಯಾವುದೇ ಒಂದು ಸಮುದಾಯದ ಸಂಕೇತವಾಗದೆ, ಅವರಲ್ಲಿನ ಚಿಂತನೆಗಳು, ವೌಲ್ಯಗಳು ವಿಚಾರಧಾರೆಗಳು ಧರ್ಮಾತೀತವಾಗಿ ಸಮಾಜದಲ್ಲಿ ಅನುಕರಣೀಯ ವಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ. ಪಾಟೀಲ್, ಅಪರ ಜಿಲ್ಲಾಧಿಕಾರಿ ಅನುರಾಧ ಮಾತನಾಡಿದರು. ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸರಳ ವಿವಾಹವಾದ ದಂಪತಿಗಳಿಗೆ ಹಾಗೂ ಶಿಕ್ಷಣ ದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾ ಯಿತು. ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಹರೀಶ್ ಎಲ್. ಗಾಂವ್ಕರ್ ಸ್ವಾಗತಿಸಿದರು.







