ಮದ್ಯವರ್ಜನ ಶಿಬಿರದಲ್ಲಿ ಯುವಕ ಮೃತ್ಯು
ಬಂಟ್ವಾಳ, ಅ.5: ಇಲ್ಲಿನ ಸಮೀಪದ ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿ ಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಸಂಗಬೆಟ್ಟು ಗ್ರಾಮದ ಮಂಚಕಲ್ಲು ನಿವಾಸಿ ಪ್ರದೀಪ್ ಗೌಡ (26) ಮೃತರು ಎಂದು ಗುರುತಿಸಲಾಗಿದೆ. ಪ್ರದೀಪ್ ಅವಿವಾಹಿತರಾಗಿದ್ದು, ಸಿದ್ದಕಟ್ಟೆಯ ಹಾರ್ಡ್ ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ವಾಮದಪದವಿನಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿ ಆರಂಭದಿಂದಲೂ ಪ್ರದೀಪ್ ಸ್ವಇಚ್ಛೆಯಿಂದ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಗುರುವಾರ ಮಧ್ಯಾಹ್ನದ ಶಿಬಿರ ಮುಗಿಸಿ ತಾಯಿಯ ಜೊತೆ ಮಾತನಾಡುತ್ತಿರುವಾಗಲೇ ಪ್ರದೀಪ್ ರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಕ್ಕಾ ಗಮಿಸಿದ ಶಿಬಿರದ ವೈದ್ಯರು ಪರೀಕ್ಷಿಸಿ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಹೃದಯಾಘಾತಕ್ಕೆ ಒಳಗಾಗಿ ಪ್ರದೀಪ್ ಮೃತಪಟ್ಟಿದಾರೆಂದು ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಸಮುದಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸ ಲಾಯಿತು. ಪುಂಜಾಲಕಟ್ಟೆ ಠಾಣೆಯಲ್ಲಿ ಮೃತರ ತಾಯಿ ರಾಧಾ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.







