ನಕಲಿ ಎನ್‌ಕೌಂಟರ್: ಅಧಿಕಾರಿಯ ಶೌರ್ಯಪದಕ ವಾಪಸಿಗೆ ಸೂಚನೆ

ಭೋಪಾಲ, ಅ.5: ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ ಎನ್‌ಕೌಂಟರ್ ನಕಲಿ ಎಂದು ಮಾನವ ಹಕ್ಕು ಸಮಿತಿ ಕಂಡುಕೊಂಡಿದ್ದು ಅವರಿಗೆ ನೀಡಲಾಗಿರುವ ಶೌರ್ಯ ಪದಕವನ್ನು ವಾಪಾಸು ಪಡೆಯುವಂತೆ ಸೂಚಿಸಲಾಗಿದೆ.
ರತ್ಲಮ್ ವಿಭಾಗದ ಡಿಐಜಿ ಆಗಿರುವ ಧರ್ಮೇಂದ್ರ ಚೌಧರಿ 2002ರಲ್ಲಿ ಜಭುವ ವಿಭಾಗದ ಎಎಸ್‌ಪಿ ಆಗಿದ್ದ ಸಂದರ್ಭ ‘ಮೋಸ್ಟ್ ವಾಂಟೆಡ್’ ಕ್ರಿಮಿನಲ್ ಆಗಿದ್ದ ಲೊಹಾರ್‌ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸಿದ್ದರು ಎಂದು ವರದಿಯಾಗಿತ್ತು. ಈ ಸಾಹಸಕಾರ್ಯಕ್ಕಾಗಿ ಅವರಿಗೆ 2004ರಲ್ಲಿ ಶೌರ್ಯಪ್ರಶಸ್ತಿ ನೀಡಲಾಗಿತ್ತು.
ಆದರೆ ಈ ಪ್ರಕರಣದ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಕರಣದ ತನಿಖೆ ನಡೆಸಿದಾಗ ಅದು ನಕಲಿ ಎನ್‌ಕೌಂಟರ್ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಚೌಧರಿಗೆ ನೀಡಲಾಗಿರುವ ಶೌರ್ಯಪ್ರಶಸ್ತಿಯನ್ನು ವಾಪಾಸು ಪಡೆಯುವಂತೆ ರಾಷ್ಟ್ರಪತಿಗಳ ಕಾರ್ಯಾಲಯದಿಂದ ಸೂಚನೆ ಬಂದಿರುವುದಾಗಿ ಆಯೋಗ ತಿಳಿಸಿದೆ.
ಆದರೆ ನಕಲಿ ಎನ್‌ಕೌಂಟರ್ ಎಂಬ ಹೇಳಿಕೆಯನ್ನು ತಳ್ಳಿಹಾಕಿರುವ ಚೌಧರಿ, ತನ್ನ ವಾದವನ್ನು ಮಂಡಿಸಲು ಅವಕಾಶ ನೀಡಲಾಗಿಲ್ಲ. ಲೊಹಾರ್ ಓರ್ವ ಕುಖ್ಯಾತ ಕ್ರಿಮಿನಲ್ ಆಗಿದ್ದು ಸುಮಾರು 14 ಪ್ರಕರಣ ಈತನ ವಿರುದ್ಧ ದಾಖಲಾಗಿತ್ತು ಎಂದಿದ್ದಾರೆ. ಅಲ್ಲದೆ ತನ್ನ ಹೇಳಿಕೆಯನ್ನು ಇಲಾಖೆಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.







