ಟ್ರೋಫಿಗಾಗಿ 22 ದಿನ 24 ತಂಡಗಳ ಪೈಪೋಟಿ
ಕೋಲ್ಕತಾ, ಅ.5: ಫಿಫಾ ಅಂಡರ್ 17 ವಿಶ್ವಕಪ್ ಆರಂಭಗೊಂಡು 32 ವರ್ಷಗಳು ಸಂದಿವೆ. ಭಾರತದಲ್ಲಿ 17ನೆ ಆವೃತ್ತಿಯ ವಿಶ್ವಕಪ್‌ಗೆ ಕ್ಷಣಗಣನೆ ಆರಂಭಗೊಂಡಿದೆ. ಅ.6ರಿಂದ 28ರ ತನಕ ಭಾರತದ ಪ್ರಮುಖ ನಗರಗಳಲ್ಲಿ ಫುಟ್ಬಾಲ್ ಪಂದ್ಯಗಳು ನಡೆಯಲಿದೆ.
ಆರಂಭದಲ್ಲಿ ಇದು ಅಂಡರ್ -16 ಚಾಂಪಿಯನ್‌ಶಿಪ್ ಆಗಿತ್ತು. 1991ರಲ್ಲಿ ಇದು 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಆಗಿ ಹೊಸ ರೂಪ ಪಡೆಯಿತು. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಫಿಫಾ ಅಂಡರ್ -17 ವಿಶ್ವಕಪ್‌ನಲ್ಲಿ ಈ ಬಾರಿ 24 ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.
ಆರಂಭದಲ್ಲಿ 16 ತಂಡಗಳು ಗ್ರೂಪ್ ಹಂತದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿತ್ತು. 2005ರಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆ 24ಕ್ಕೆ ಏರಿತು. ನೈಜೀರಿಯಾ ಚೊಚ್ಚಲ ಚಾಂಪಿಯನ್ ತಂಡ. 1985ರಲ್ಲಿ ಚೀನಾದಲ್ಲಿ ನಡೆದ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ತಂಡವನ್ನು 2-0 ಅಂತರದಲ್ಲಿ ಮಣಿಸಿ ಚೊಚ್ಚಲ ಟ್ರೋಫಿ ಎತ್ತಿಕೊಂಡಿತು. ನೈಜೀರಿಯಾ ತಂಡ ಹಾಲಿ ಚಾಂಪಿಯನ್ . 2015ರಲ್ಲಿ ಚಿಲಿಯಲ್ಲಿ ನಡೆದ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಮಾಲಿ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ನೈಜೀರಿಯಾ 5 ಬಾರಿ ಪ್ರಶಸ್ತಿ ಎತ್ತಿರುವ ಯಶಸ್ವಿ ತಂಡ. ಒಟ್ಟು 8 ಬಾರಿ ನೈಜೀರಿಯಾ ಫೈನಲ್‌ಗೇರಿತ್ತು. 2013 ಮತ್ತು 2015ರಲ್ಲಿ ಸತತ ಎರಡು ಪ್ರಶಸ್ತಿ ಜಯಿಸಿದ್ದ ನೈಜೀರಿಯಾ ಈ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿಲ್ಲ. ಈ ಕಾರಣದಿಂದಾಗಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ನೈಜೀರಿಯಾ ಕಳೆದುಕೊಂಡಿದೆ.
ವಿಶ್ವಕಪ್ ಪ್ರಶಸ್ತಿ ಜಯಿಸಿದ್ದ ಏಕೈಕ ಏಷ್ಯಾ ತಂಡ ಸೌದಿ ಅರೇಬಿಯಾ. 1989ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾ ತಂಡ ಆತಿಥೇಯ ಸ್ಕಾಟ್ಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಲ್ಲಿ ಬಗ್ಗು ಬಡಿದು ಪ್ರಶಸ್ತಿ ಎತ್ತಿಕೊಂಡಿತ್ತು.
10 ಬಾರಿ 100 ಗೋಲುಗಳು ದಾಖಲು: ಈ ತನಕ ನಡೆದಿರುವ 16 ವಿಶ್ವಕಪ್ ಟೂರ್ನಿಗಳಲ್ಲಿ 10 ಬಾರಿ 100ಕ್ಕೂ ಅಧಿಕ ಗೋಲುಗಳು ದಾಖಲಾಗಿವೆ. 1993ರಲ್ಲಿ ಜಪಾನ್‌ನಲ್ಲಿ ನಡೆದ ವಿಶ್ವಕಪ್ ಕೂಟದಲ್ಲಿ 107 ಗೋಲುಗಳು ದಾಖಲಾಗಿತ್ತು.
1989ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ 77 ಗೋಲುಗಳು ದಾಖಲಾಗಿತ್ತು. ಇದು ಕೂಟಗಳಲ್ಲಿ ದಾಖಲಾಗಿರುವ ಕನಿಷ್ಠ ಗೋಲುಗಳು. 2013ರಲ್ಲಿ ಅರಬ್ ಎಮಿರೆಟ್ಸ್ ನಲ್ಲಿ ನಡೆದ ವಿಶ್ವಕಪ್‌ನಲ್ಲಿ 172 ಗೋಲುಗಳು ದಾಖಲಾಗಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿ ದಾಖಲಾಗಿರುವ ಗರಿಷ್ಠ ಗೋಲುಗಳು ಆಗಿವೆ.
ಕಳೆದ ಆವೃತ್ತಿಯಲ್ಲಿ ನೈಜೀರಿಯಾದ ವಿಕ್ಟರ್ ಒಸ್ಮಿಯೆನ್ 10 ಗೋಲುಗಳನ್ನು ದಾಖಲಿಸಿದ್ದರು.







