ಆತಿಥೇಯ ಭಾರತ ಚೊಚ್ಚಲ ಪ್ರವೇಶ
ಮೊದಲ ಪಂದ್ಯದಲ್ಲಿ ಅಮೆರಿಕ ಎದುರಾಳಿ

ಹೊಸದಿಲ್ಲಿ, ಅ.5: ಆತಿಥೇಯ ಭಾರತ ಮೊದಲ ಬಾರಿ ಅಂಡರ್ -17 ಫಿಫಾ ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದು, ಶುಕ್ರವಾರ ರಾತ್ರಿ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ.
ಭಾರತ ಆತಿಥೇಯ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ಕೂಟದಲ್ಲಿ ಆಡುವ ಅವಕಾಶ ಪಡೆದಿದೆ. ಗ್ರೂಪ್ ‘ಎ’ನಲ್ಲಿ ಅಮೆರಿಕ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿದೆ. ಆದರೆ ಭಾರತದ ಆಟಗಾರರನ್ನು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ(ಎಐಎಫ್‌ಎಫ್ ) ಯುರೋಪ್, ಮೆಕ್ಸಿಕೊಗೆ ಕಳುಹಿಸಿ ತರಬೇತಿ ನೀಡಿದೆ. ಮುಂದೆ ದೇಶದಲ್ಲಿ ಫುಟ್ಬಾಲ್ ಅಭಿವೃದ್ಧಿಗೆ ಭಾರತದ ಪಾಲಿಗೆ ವಿಶ್ವಕಪ್ ಅತ್ಯಂತ ಮಹತ್ವದ್ದಾಗಿದೆ.
ಅಮೆರಿಕ ತಂಡದಲ್ಲಿರುವ ಬಹುತೇಕ ಆಟಗಾರರು ಪ್ರಮುಖ ಯುವ ಫುಟ್ಬಾಲ್ ಲೀಗ್‌ಗಳಲ್ಲಿ ಭಾಗವಹಿಸಿರುವ ಅನುಭವ ಹೊಂದಿದ್ದಾರೆ.ಹಲವು ಮಂದಿ ಯುರೋಪ್‌ನ ಕ್ಲಬ್‌ಗಳಲ್ಲಿ ಆಡುವ ಮೂಲಕ ಗಮನ ಸೆಳೆದಿದ್ದಾರೆ.
ಭಾರತ ತವರಿನ ವಾತಾವರಣದ ಲಾಭ ಪಡೆಯಲು ನೋಡುತ್ತಿದೆ. ನಾಯಕ ಅಮರ್‌ಜಿತ್ ಸಿಂಗ್ ಮತ್ತು ಅವರ ತಂಡ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದೆ.
ಭಾರತದ ಆಟಗಾರರು ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಆದರೆ ಭಾರತದ ಆಟಗಾರರಿಗೆ ವೃತ್ತಿಪರ ಲೀಗ್‌ಗಳಲ್ಲಿ ಆಡಿರುವ ಅನುಭವ ಇಲ್ಲ. ಈ ಕಾರಣದಿಂದಾಗಿ ಅಮೆರಿಕದ ಆಟಗಾರರ ಕಠಿಣ ಸವಾಲು ಎದುರಿಸಬೇಕಾಗಿದೆ.
ಕಳೆದ ಮಾರ್ಚ್‌ನಲ್ಲಿ ಲೂಯಿಸ್ ನಾರ್ಟನ್ ಡಿ ಮೆಟೊಸ್ ತಂಡದ ಪ್ರಧಾನ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಪೋರ್ಚುಗಲ್‌ನ ಡಿ ಮೆಟೊಸ್ ಅವರು ಕಳೆದ ಏಳು ತಿಂಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಜರ್ಮನಿಯ ನಿಕೊಲೈ ಆ್ಯಡಮ್ 2015ರಲ್ಲಿ ಭಾರತದ ಅಂಡರ್-17 ಫುಟ್ಬಾಲ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಅವರು ದೇಶಾದ್ಯಂತ ಇರುವ ಯುವ ಪ್ರತಿಭೆಗಳನ್ನು ಪತ್ತೆ ಹಚ್ಚಿ ತಂಡ ಕಟ್ಟುವ ಕಡೆಗೆ ಗಮನ ಹರಿಸಿದ್ದರು. ಆದರೆ ಆಟಗಾರರನ್ನು ಬೈಯುವ ಸ್ವಭಾವ ಅವರನ್ನು ಹುದ್ದೆಯಿಂದ ಕೆಳಗಿಳಿಯಲು ಕಾರಣವಾಗಿತ್ತು.
ಇದೀಗ ಏಳು ತಿಂಗಳಲ್ಲಿ ಕೋಚ್ ಡಿ ಮೆಟೊಸ್ ತಂಡವನ್ನು ಯಾವ ರೀತಿ ಕಟ್ಟಿದ್ದಾರೆ ಎನ್ನುವುದು ವಿಶ್ವಕಪ್‌ನಲ್ಲಿ ಗೊತ್ತಾಗಲಿದೆ.
ಯುಎಸ್ ತಂಡದಲ್ಲಿರುವ 17 ಆಟಗಾರರು ಕಳೆದ ಎಪ್ರಿಲ್‌ನಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡಿದವರು. ಅರ್ಹತಾ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಮೆಕ್ಸಿಕೊ ವಿರುದ್ಧ ಅಮೆರಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಎರಡನೆ ಸ್ಥಾನ ಪಡೆದಿತ್ತು.







