ಜಾಯ್ ಐಸ್ ಕ್ರೀಮ್ ಕಂಪೆನಿಯಿಂದ ಜಮೀನು ಮಾರಾಟವನ್ನು ಊರ್ಜಿತಗೊಳಿಸಿದ ಹೈಕೋರ್ಟ್
ಬೆಂಗಳೂರು, ಅ.6: ಜಾಯ್ ಐಸ್ ಕ್ರೀಮ್ ಕಂಪೆನಿಯು ಪ್ರೆಸ್ಟೀಜ್ ಕಂಪೆನಿಗೆ 3 ಎಕರೆ 23 ಗುಂಟೆ ಜಮೀನು ಮಾರಾಟ ಮಾಡಿ್ದನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ.
ಈ ಸಂಬಂಧ ಪ್ರೆಸ್ಟೀಜ್ ಕಂಪೆನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿತು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯು ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂಬರ್ 43ರ 3 ಎಕರೆ 23 ಗುಂಟೆ ಜಮೀನನ್ನು 2006ರಲ್ಲಿ ಜಾಯ್ ಐಸ್ ಕ್ರೀಮ್ ಕಂಪೆನಿಗೆ ಮಂಜೂರು ಮಾಡಿತ್ತು. ಮಂಜೂರು ಮಾಡಿದ 40 ದಿನಗಳಲ್ಲೇ ಜಾಯ್ ಐಸ್ ಕ್ರೀಮ್ ಕಂಪೆನಿಯವರು ಪ್ರೆಸ್ಟೀಜ್ ಕಂಪೆನಿಗೆ ಜಮೀನನ್ನು ಮಾರಾಟ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಮೀನನ್ನು ಮಾರಾಟ ಮಾಡಲು ಅವಕಾಶವಿಲ್ಲದಿದ್ದರೂ ಮಾರಾಟ ಮಾಡಿದ್ದಾರೆ ಎಂದು ಹೇಳಿ ಕಟ್ಟಡ ಸಹಿತ ಜಮೀನನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ, ಈ ಕ್ರಮವನ್ನು ಪ್ರಶ್ನಿಸಿ ಪ್ರೆಸ್ಟೀಜ್ ಕಂಪೆನಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ಶುಕ್ರವಾರ ನ್ಯಾಯಪೀಠವು ವಕೀಲರ ವಾದ ಪ್ರತಿವಾದವನ್ನು ಆಲಿಸಿ ಸರಕಾರದ ಆದೇಶವನ್ನು ರದ್ದುಪಡಿಸಿ ಜಮೀನು ಮಾರಾಟ ಮಾಡಿದ್ದನ್ನು ಊರ್ಜಿತಗೊಳಿಸಿತು.





