ಶಿಕಾಗೊ, ಬೋಸ್ಟನ್‌ಗಳಲ್ಲೂ ಸ್ಥಳ ಸಮೀಕ್ಷೆ ನಡೆಸಿದ್ದ ಲಾಸ್ ವೇಗಸ್ ಹಂತಕ

ಶಿಕಾಗೊ, ಅ. 6: ಲಾಸ್ ವೇಗಸ್‌ನಲ್ಲಿ ಅಮೆರಿಕದ ಆಧುನಿಕ ಇತಿಹಾಸದಲ್ಲೇ ಭೀಕರವೆನಿಸಿದ ಹತ್ಯಾಕಾಂಡ ನಡೆಸಿದ ಪಾತಕಿಯು, ಹತ್ಯಾಕಾಂಡಕ್ಕಾಗಿ ಶಿಕಾಗೊ ಮತ್ತು ಬೋಸ್ಟನ್‌ಗಳಲ್ಲಿಯೂ ಸ್ಥಳ ಸಮೀಕ್ಷೆ ನಡೆಸಿದ್ದನು ಎಂದು ಅಮೆರಿಕದ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಸ್ಟೀಫನ್ ಪ್ಯಾಡಕ್ ಆಗಸ್ಟ್‌ನಲ್ಲಿ ಶಿಕಾಗೊದ ಬ್ಲಾಕ್‌ಸ್ಟೋನ್ ಹೊಟೇಲ್‌ನಲ್ಲಿ ಎರಡು ಕೋಣೆಗಳನ್ನು ಕಾದಿರಿಸಿದ್ದನು. ಈ ಹೊಟೇಲ್‌ನ ಎದುರುಗಡೆ ಬೃಹತ್ ಉದ್ಯಾನವನವಿದ್ದು, ಅಲ್ಲಿ ಆಗಸ್ಟ್‌ನಲ್ಲಿ ನಾಲ್ಕು ದಿನಗಳ ಕಾಲ ಜನಪ್ರಿಯ ಲೊಲಾಪಲೂಝ ಸಂಗೀತ ಉತ್ಸವ ನಡೆದಿತ್ತು ಎಂದು ಟಿಎಂಝಡ್ ವೆಬ್‌ಸೈಟ್ ಮತ್ತು ಎನ್‌ಬಿಸಿ ನ್ಯೂಸ್ ವರದಿ ಮಾಡಿವೆ.
64 ವರ್ಷದ ನಿವೃತ್ತ ಅಕೌಂಟಂಟ್ ಹಾಗೂ ಜುಗಾರಿಕೋರ ಪ್ಯಾಡಕ್ ಬೋಸ್ಟನ್ ನಗರಕ್ಕೂ ಹೋಗಿದ್ದನು ಎಂದು ಹಿರಿಯ ಕಾನೂನು ಅನುಷ್ಠಾನ ಅಧಿಕಾರಿಗಳನ್ನು ಉಲ್ಲೇಖಿಸಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
ಪಾತಕಿಯ ಇಲೆಕ್ಟ್ರಾನಿಕ್ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಶಿಕಾಗೊ ಗ್ರಾಂಟ್ ಪಾರ್ಕ್‌ನಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಮಾಜಿ ಅಧ್ಯಕ್ಷರ ಮಗಳು ಮಲಿಯಾ ಒಬಾಮ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
ರವಿವಾರ ಲಾಸ್ ವೇಗಸ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜನರ ಮೇಲೆ ಸ್ಟೀಫನ್ ಪ್ಯಾಡಕ್ ತನ್ನ ಹೊಟೇಲ್ ಕೋಣೆಯಿಂದ ಮನಬಂದಂತೆ ಗುಂಡುಹಾರಿಸಿ 58 ಮಂದಿಯನ್ನು ಕೊಂದಿರುವುದನ್ನು ಸ್ಮರಿಸಬಹುದಾಗಿದೆ. ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.







