ಕೊನೆಗೂ ಮಣಿಪಾಲ-ಪರ್ಕಳ ರಸ್ತೆ ದುರಸ್ತಿಗೆ ಚಾಲನೆ

ಉಡುಪಿ, ಅ.6: ಸಾರ್ವಜನಿಕರ ಆಕ್ರೋಶ ಹಾಗೂ ಉಡುಪಿ-ಮಣಿಪಾಲ ಗಳ ವಿವಿಧ ಸಂಘಟನೆಗಳ ಪ್ರತಿಭಟನೆ, ಧರಣಿಗಳಿಗೆ ಕಾರಣವಾದ ಮಣಿಪಾಲ-ಪರ್ಕಳ ನಡುವಿನ ರಸ್ತೆಯ ದುರಸ್ತಿ ಕಾರ್ಯ ಕೊನೆಗೂ ಪ್ರಾರಂಭಗೊಂಡಿದೆ.
ಮಲ್ಪೆ-ತೀರ್ಥಹಳ್ಳಿಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎಯ 90 ಕಿ.ಮೀ. ರಸ್ತೆಯಲ್ಲಿ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಪರ್ಕಳದ ಬಿಎಂಎಸ್ ಶಾಲೆಯವರೆಗಿನ ಭಾಗ ಸಂಪೂರ್ಣವಾಗಿ ಹಾಳಾಗಿ ಈ ಮಾರ್ಗದಲ್ಲಿ ವಾಹನದಲ್ಲಿ ಸಂಚರಿಸುವುದೇ ದುಸ್ತರ ಎನಿಸಿತ್ತು. ಕಳೆದ ವಾರ ಇದೇ ಮಾರ್ಗದಲ್ಲಿ ಹೆತ್ತವರೊಂದಿಗೆ ಬೈಕ್‌ನಲ್ಲಿ ಮನೆಗೆ ಬರುತಿದ್ದ ಒಂದೂವರೆ ವರ್ಷ ಪ್ರಾಯದ ಮಗು, ತಂದೆ ಹೊಂಡ ತಪ್ಪಿಸುವ ಪ್ರಯತ್ನದಲ್ಲಿ ಬೈಕ್‌ನೊಂದಿಗೆ ಬಿದ್ದಾಗ, ತಾಯಿ ಕೈಯಿಂದ ಜಾರಿ ರಸ್ತೆಗೆ ಬಿದ್ದು ಮೃತಪಟ್ಟಿತ್ತು.
ಈ ಘಟನೆಯ ಬಳಿಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿದ್ದು, ಇದೀಗ ರಸ್ತೆ ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ. ನಿನ್ನೆ ಜಿಲ್ಲೆಗೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆಗೆ ಕೆಲವು ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸಲು ನಡೆಸಿದ ಪ್ರಯತ್ನವ್ನು ಪೊಲೀಸರು ವಿಫಲಗೊಳಿಸಿದ್ದರು.
ಮಣಿಪಾಲ-ಪರ್ಕಳ ನಡುವೆ ಸಂಪೂರ್ಣವಾಗಿ ಹೊಂಡಮಯಗೊಂಡ ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸುವಂತೆ ಸಂಸದೆ ಆದೇಶಿಸಿದ್ದು, ಪರ್ಕಳ ಕಡೆಯಿಂದ ಕೆಲಸ ನಿನ್ನೆ ಪ್ರಾರಂಭಗೊಂಡಿತ್ತು. ಆದರೆ ನಿನ್ನೆ ಸಂಜೆಯಂತೆ ಇಂದು ಸಂಜೆ ಸಹ ಮತ್ತೆ ಮಳೆ ಸುರಿಯತೊಡಗಿದ್ದು, ದುರಸ್ತಿ ಕಾಮಗಾರಿಗೆ ಅಡಚಣೆ ಉಂಟು ಮಾಡಿದೆ.







