ತುಳು ಅಕಾಡೆಮಿ: ತುಳು ಸಾಹಿತ್ಯ ಸಮ್ಮೇಳನ ಉಪಸಮಿತಿ ಸಭೆ
ಮಂಗಳೂರು, ಅ. 6: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸುವ ಸಲುವಾಗಿ ಅಕಾಡೆಮಿ ವತಿಯಿಂದ ರಚಿಸಲಾದ ಉಪಸಮಿತಿ ಸಭೆಯು ಅಕಾಡೆಮಿ ಅಧ್ಯಕ್ಷರಾದ ಎ. ಸಿ. ಭಂಡಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ತಾಲೂಕು ಮಟ್ಟದ ಪ್ರಥಮ ತುಳು ಸಾತ್ಯ ಸಮ್ಮೇಳನವನ್ನು ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಬಂಟ್ವಾಳದಲ್ಲಿ ಆಯೋಜಿಸಲು ತೀರ್ಮಾನಿ ಸಲಾಗಿದ್ದು ಸಮ್ಮೇಳನದ ಸ್ವರೂಪ ಮತ್ತು ರೂಪುರೇಶೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ತಾಲೂಕಿನಲ್ಲಿರುವ ತುಳುಪರ ಸಂಘಟನೆಗಳು, ತುಳು ಸಾಹಿತಿ, ಕವಿ, ಸಂಶೋಧಕರು, ಜಾನಪದ ಕಲಾವಿದರು ಒಳಗೊಂಡಂತೆ ಸಮಿತಿ ರಚಿಸಿಕೊಂಡು ತುಳು ಸಮ್ಮೇಳನವನ್ನು ನಡೆಸಲಾಗುವುದು. ಸಮ್ಮೇಳನದ ವ್ಯವಸ್ಥೆಯ ಬಗ್ಗೆ ಆಯಾಯ ತಾಲೂಕಿನ ತುಳು ಪರ ಸಂಘಟನೆಗಳ ಪ್ರಮುಖರ ಸಲಹೆಗಳನ್ನು ಪಡೆದು ಸಮ್ಮೇಳನದ ಸ್ವರೂಪ ನಿರ್ಧರಿಸುವುದು ಒಳಿತು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಉಪಸಮಿತಿ ಸಂಚಾಲಕ ಅಕಾಡೆಮಿ ಸದಸ್ಯ ಡಾ. ವೈ. ಎನ್ ಶೆಟ್ಟಿ ಸ್ವಾಗತಿಸಿದರು. ಸದಸ್ಯರಾದ ತಾರನಾಥ ಗಟ್ಟಿ ಕಾಪಿಕಾಡು, ಶಿವಾನಂದ ಕರ್ಕೇರ, ಡಾ. ವಾಸುದೇವ ಬೆಳ್ಳೆ, ವಿದ್ಯಾಶ್ರೀ ಎಸ್., ಮಾಜಿ ಸದಸ್ಯರಾದ ಡಿ. ಎಂ. ಕುಲಾಲ್, ರಘು ಇಡ್ಕಿದು ಭಾಗವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.





