ಕ್ಷಯರೋಗ ತಡೆಗೆ ಸಂಪೂರ್ಣ ಚಿಕಿತ್ಸೆ ಅಗತ್ಯ: ಡಾ.ರಾಮರಾವ್

ಉಡುಪಿ, ಅ.6: ಜಿಲ್ಲೆಯಲ್ಲಿ ಈಗಾಗಲೇ 44 ಕ್ಷಯ ರೋಗಿಗಳನ್ನು ಗುರುತಿಸಲಾಗಿದ್ದು, ಕ್ಷಯರೋಗ ತಡೆಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಅತ್ಯಂತ ಅಗತ್ಯ ಎಂದು ಪ್ರಬಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮರಾವ್ ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಕುಟುಂಬ ಕಲ್ಯಾಣ ಇಲಾಖೆ, ಕ್ಷಯರೋಗ ನಿಯಂತ್ರಣಾಧಿಕಾರಿ ಕಚೇರಿ, ಸಹಾಯಕ ಔಷಧ ನಿಯಂತ್ರಕರ ಕಚೇರಿ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ ಉಡುಪಿ ತಾಲೂಕು ವ್ಯಾಪಾರಸ್ಥರಿಗೆ ಕ್ಷಯ ರೋಗದ ಕುರಿತು ತಿಳುವಳಿಕೆ ನೀಡುವ ಕಾರ್ಯಾಗಾರದ ಅ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕ್ಷಯರೋಗವು ಗಾಳಿಯಲ್ಲಿ ಬಹುಬೇಗ ಹರಡುವ ಕಾಯಿಲೆಯಾಗಿದ್ದು, ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಸತತ ಕೆಮ್ಮು, ಜ್ವರ ಸಂಜೆ ವೇಳೆ ಹೆಚ್ಚಳ, ತೂಕ ಕಡಿಮೆಯಾಗುವುದು ಪ್ರಮುಖ ಲಕ್ಷಣವಾಗಿದೆ. ವೈದ್ಯರು ಹೇಳುವವರೆಗೆ ಸಂಪೂರ್ಣ ಚಿಕಿತ್ಸೆ ಪಡೆದರೆ ಮಾತ್ರ ಕ್ಷಯ ರೋಗದಿಂದ ಸಂಪೂರ್ಣ ಗುಣಮುಖವಾಗಲು ಸಾಧ್ಯ ಎಂದರು.
ಉಡುಪಿ ಜಿಲ್ಲೆ ರೋಗ ಪತ್ತೆಯಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಪತ್ತೆಯಾಗದೆ ಉಳಿದವರನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ಹೊಣೆ ಖಾಸಗಿ ಯವರ ಮೇಲಿದೆ. ರೋಗ ಪತ್ತೆ ಮತ್ತು ನಿರ್ಮೂಲನೆಗೆ ಎಲ್ಲರ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದ ಅವರು, ಕಾರ್ಯಾಗಾರದಿಂದ ಇನ್ನಷ್ಟು ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಸಾಮಾಜಿಕ ಆರೋಗ್ಯಕ್ಕೆ ಔಷಧಿ ವ್ಯಾಪಾರಿಗಳ ಹೊಣೆ ಮುಖ್ಯ ವಾಗಿದ್ದು, ರೋಗಿಗಳಿಗೆ ವೈದ್ಯರು ಹೇಳಿದ ಔಷಧಿಗಳನ್ನು ಸರಿಯಾಗಿ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಇನ್ನೂ ಅಳಿಯದ ಕಾಯಿಲೆ ಎಂದರೆ ಅದು ಕ್ಷಯ ರೋಗ. ಮಾಹಿತಿಗಳ ಬಚ್ಚಿಡುವಿಕೆಯಿಂದ ಕಾಯಿಲೆ ಹರಡುತ್ತಿದ್ದು, ಸಮಗ್ರ ಮಾಹಿತಿ ಲ್ಯವಾದರೆ ಸಮರ್ಪಕ ಚಿಕಿತ್ಸೆ ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹ ಕೈಜೋಡಿಸಬೇಕು ಎಂದರು. ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ವಿ.ಜಿ.ಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ ಪ್ರೇಮಾನಂದ ಉಪಸ್ಥಿತರಿದ್ದರು, ಸಂದೀಪ್ ವಂದಿಸಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ತಾಲೂಕಿನ ಎಲ್ಲಾ ಔಷಧ ವ್ಯಾಪಾರಸ್ಥರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.







