ಅ. 7 ರಂದು ರಾಂಚಿಯಲ್ಲಿ ಮೊದಲ ಟ್ವೆಂಟಿ-20 ಪಂದ್ಯ
ಆಸ್ಟ್ರೇಲಿಯ ವಿರುದ್ಧ ಮೇಲುಗೈ ಸಾಧಿಸಲು ಭಾರತದ ಪ್ರಯತ್ನ

ರಾಂಚಿ, ಅ.6: ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 4-1 ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಶನಿವಾರ ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನ ಪ್ರಯತ್ನ ನಡೆಸಲಿದೆ.
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ತಯಾರಿ ನಡೆಸಿದೆ. ಭಾರತದ ಬ್ಯಾಟಿಂಗ್ ಸರದಿ,ಸ್ಪಿನ್ ಮತ್ತು ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಇಬ್ಬರು ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಕ್ಕೆ ಪ್ರತಿಯೊಂದು ಪಂದ್ಯದಲ್ಲೂ ಬ್ಯಾಟಿಂಗ್‌ಗೆ ಸವಾಲಾಗಿದ್ದರು.
ಭಾರತ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 9-3 ಗೆಲುವಿನ ದಾಖಲೆ ಹೊಂದಿದೆ. ಕಳೆದ ಜನವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಆಸ್ಟ್ರೇಲಿಯದಲ್ಲಿ ಭಾರತ 3 ಪಂದ್ಯಗಳ ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಸಾಧಿಸಿತ್ತು.
ಕಳೆದ ಐದು ಸರಣಿಗಳಲ್ಲಿ ಆಸ್ಟ್ರೇಲಿಯ ವಿರುದ್ಧ ಟೀಮ್ ಇಂಡಿಯಾ ಕೇವಲ 1 ಪಂದ್ಯದಲ್ಲಿ ಸೋಲು ಅನುಭವಿಸಿತ್ತು.
ಭಾರತ ತಂಡದಲ್ಲಿ ಹಿರಿಯ ಆಟಗಾರ ಆಶೀಷ್ ನೆಹ್ರಾ ಇದ್ದಾರೆ. 38ರ ಹರೆಯದ ಎಡಗೈ ವೇಗಿ ನೆಹ್ರಾ ಅವರು ಕಳೆದ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿ ಟ್ವೆಂಟಿ-20 ಪಂದ್ಯವನ್ನಾಡಿದ್ದರು. ನೆಹ್ರಾ 26 ಟ್ವೆಂಟಿ-20 ಪಂದ್ಯಗಳನ್ನಾಡಿದ್ದಾರೆ. 34 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಕೊಹ್ಲಿ ಬಳಗದಲ್ಲಿ ಬೇರೆ ಬೇರೆ ತಜ್ಞ ವೇಗದ ಬೌಲರ್‌ಗಳಿದ್ದಾರೆ. ಭುವನೇಶ್ವರ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ಇದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಪಾಂಡ್ಯ 55.50 ಸರಾಸರಿಯಂತೆ 222 ರನ್ ಮತ್ತು 6 ವಿಕೆಟ್ ಪಡೆದು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಭಾರತದ ಪ್ರಮುಖ ಆಲ್‌ರೌಂಡರ್ ಆಗಿ ಪಾಂಡ್ಯ ರೂಪುಗೊಳ್ಳುತ್ತಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪಾಂಡ್ಯ ದೊಡ್ಡ ಕೊಡುಗೆ ನೀಡುವುದನ್ನು ನಿರೀಕ್ಷಿಸಲಾಗಿದೆ.
ಪಾಂಡ್ಯ ನಂ.7 ಕ್ರಮಾಂಕದಲ್ಲಿ ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 66 ಎಸೆತಗಳಲ್ಲಿ 83 ರನ್ ಸಿಡಿಸಿದ್ದರು.ಆ್ಯಡಮ್ ಝಾಂಪ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಇಂದೋರ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನಂ.4 ಕ್ರಮಾಂಕದಲ್ಲಿ 72 ಎಸೆತಗಳಲ್ಲಿ 78 ರನ್ ಸಿಡಿಸಿದ್ದರು. ಭಾರತದ ಸರಣಿ ಗೆಲುವಿಗೆ ಪಾಂಡ್ಯ ದೊಡ್ಡ ಕೊಡುಗೆ ನೀಡಿದ್ದರು. ಪಾಂಡ್ಯ ಮತ್ತು ಕೇದಾರ್ ಜಾಧವ್ ಭಾರತದ ಪ್ರಮುಖ ಆಲ್‌ರೌಂಡರ್‌ಗಳಾಗಿದ್ದಾರೆ. ಆರಂಭಿಕ ದಾಂಡಿಗ ರೋಹಿತ್ ಶರ್ಮ ಏಕದಿನ ಸರಣಿಯಲ್ಲಿ ಗರಿಷ್ಠ ರನ್ (296) ದಾಖಲಿಸಿರುವ ದಾಂಡಿಗ. ಟ್ವೆಂಟಿ-20 ಸರಣಿಯಲ್ಲೂ ಅವರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ.
ಶಿಖರ್ ಧವನ್ ಅವರು ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಐದು ಏಕದಿನ ಪಂದ್ಯಗಳ ಸರಣಿಯಿಂದ ದೂರ ಉಳಿದಿದ್ದರು. ಟ್ವೆಂಟಿ-20 ಸರಣಿಗೆ ತಂಡಕ್ಕೆ ವಾಪಸಾಗಿದ್ದಾರೆ.
ಅಜಿಂಕ್ಯ ರಹಾನೆ ಏಕದಿನ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದರೂ, ಟ್ವೆಂಟಿ-20 ಸರಣಿಯಲ್ಲಿ ಲೋಕೇಶ್ ರಾಹುಲ್‌ಗೆ ಅವಕಾಶ ನೀಡಲಾಗಿದೆ.
ರಾಹುಲ್ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 67 ರನ್ ಸಿಡಿಸಿದ್ದರು. ಭಾರತ ಮೂವರು ಅಗ್ರ ಸರದಿಯ ದಾಂಡಿಗರು ಫುಲ್ ಫಾರ್ಮ್‌ನಲ್ಲಿದ್ದಾರೆ. ಶಿಖರ್ ಧವನ್ ಅವರ ಅಗಮನದಿಂದಾಗಿ ಪೈಪೋಟಿ ಶುರುವಾಗಿದೆ. ಆರಂಭಿಕ ದಾಂಡಿಗ ರಾಗಿ ಯಾರನ್ನು ಕಣಕ್ಕಿಳಿಸುವುದು ಎಂಬ ವಿಚಾರಲ್ಲಿ ನಾಯಕ ಕೊಹ್ಲಿ ಗೊಂದಲಕ್ಕೆ ಸಿಲುಕಿದ್ದಾರೆ.
ಆಸ್ಟ್ರೇಲಿಯ ತಂಡದ ಆರಂಭಿಕ ದಾಂಡಿಗರಾದ ಆ್ಯರೊನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ಏಕದಿನ ಸರಣಿಯಲ್ಲಿ ಫಿಂಚ್ 3 ಪಂದ್ಯಗಳಲ್ಲಿ 250 ರನ್ ಮತ್ತು ವಾರ್ನರ್ 5 ಏಕದಿನ ಪಂದ್ಯಗಳಲ್ಲಿ 245 ರನ್ ದಾಖಲಿಸಿದ್ದಾರೆ. ನಾಯಕ ಸ್ಮಿತ್ ಕಳೆದ 10 ಏಕದಿನ ಪಂದ್ಯಗಳಲ್ಲಿ 347 ರನ್ ದಾಖಲಿಸಿದ್ದಾರೆ.ಅವರು ಶತಕದ ಬರ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯದ ಟ್ವೆಂಟಿ- 20 ತಂಡದಲ್ಲಿ ಎಡಗೈ ವೇಗಿ ಜೇಸನ್ ಬೆಹೆರೆನ್ಡಾಫ್ , ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಪೈನೆ, ಆಲ್‌ರೌಂಡರ್ ಮೊಯ್ಸಿಸ್ ಹೆನ್ರಿಕ್ ಮತ್ತು ಡ್ಯಾನ್ ಕ್ರಿಶ್ಟಿಯನ್ ಸ್ಥಾನ ಪಡೆದಿದ್ದಾರೆ.
►ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ(ಉಪನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಆಶೀಷ್ ನೆಹ್ರಾ, ಅಕ್ಷರ್ ಪಟೇಲ್.
►ಆಸ್ಟ್ರೇಲಿಯ: ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್(ಉಪನಾಯಕ), ಜೇಸನ್ ಬೆಹೆರೆನ್ಡಾಫ್ , ಡ್ಯಾನ್ ಕ್ರಿಶ್ಟಿಯನ್, ನಥಾನ್-ಕೌಲ್ಟರ್ ನೀಲ್, ಪ್ಯಾಟ್ರಿಕ್ ಕಮಿನ್ಸ್, ಆ್ಯರೊನ್ ಫಿಂಚ್, ಟ್ರಾವಿಸ್ ಹೆಡ್, ಮೊಯ್ಸಿಸ್ ಹೆನ್ರಿಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಪೈನೆ, ಕೇನ್ ರಿಚರ್ಡ್ಸನ್, ಆ್ಯಡಮ್ ಝಾಂಪ.
►ಪಂದ್ಯದ ಸಮಯ: ರಾತ್ರಿ 7:00 ಗಂಟೆಗೆ ಆರಂಭ







