ಕಾಳುಮೆಣಸು ಆಮದು ತಡೆಗೆ ಬೆಳೆಗಾರರ ಸಂಘಟನೆಗಳ ಒತ್ತಾಯ

ಮಡಿಕೇರಿ,ಅ.6 :ವಿಯೆಟ್ನಾಂನಿಂದ ಕಾಳುಮೆಣಸು ಆಮದಾಗುತ್ತಿರುವುದರಿಂದ ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದು, ಕಾಫಿ ಬೆಳೆಯುವ ಜಿಲ್ಲೆಗಳ ಸಂಸದರು ಹಾಗೂ ಶಾಸಕರುಗಳು ಆಮದು ತಡೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೊಡಗು ಜಿಲ್ಲಾ ಬೆಳೆಗಾರರ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷರಾದ ನಂದಾ ಬೆಳ್ಯಪ್ಪ, ಒಕ್ಕೂಟ ಈಗಾಗಲೆ ವಿಯೆಟ್ನಾಂ ಕಾಳು ಮೆಣಸು ಆಮದಿನಿಂದ ಆಗುತ್ತಿರುವ ಕಷ್ಟ ನಷ್ಟದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಬಿ.ಬಿ.ಮಾದಯ್ಯ ಅವರು ಕೇಂದ್ರ್ರ ಸರ್ಕಾರಕ್ಕೆ ಬರೆದ ಪತ್ರಕ್ಕೆ ಉತ್ತರ ಬಂದಿದ್ದು, ಕೇಂದ್ರ ಅಬಕಾರಿ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಸ್ಟಾಂಡಡ್ರ್ಸ್ ಅಥಾರಿಟಿ ಆಫ್ ಇಂಡಿಯಾ ಇವುಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಲಾಗಿದೆ. ಆದರೆ, ಮತ್ತಷ್ಟು ಪರಿಣಾಮಕಾರಿ ಕ್ರಮಗಳು ಆಗಬೇಕಾದರೆ ಕೇಂದ್ರ ಸರ್ಕಾರದ ಮೇಲೆ ಕಾಫಿ ಬೆಳೆಯುವ ಜಿಲ್ಲೆಗಳ ಜನಪ್ರತಿನಿಧಿಗಳು ಒತ್ತಡ ಹೇರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಂಬಂಧಿಸಿದ ಸಂಸದರು ಹಾಗೂ ಶಾಸಕರ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ಕೇಂದ್ರಕ್ಕೆ ಕಾಳು ಮೆಣಸು ಆಮದಿನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದು ನಂದಾ ಬೆಳ್ಯಪ್ಪ ತಿಳಿಸಿದರು.
ಬೆಳೆಗಾರರ ಸಂಘದ ಖಜಾಂಚಿ ಮಾದಯ್ಯ ಮಾತನಾಡಿ, ಶ್ರೀಲಂಕಾದ ಮೂಲಕ ಕಾಳು ಮೆಣಸನ್ನು ಆಮದು ಮಾಡಿದರೆ ತೆರಿಗೆ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ವಿಯೆಟ್ನಾಂನಿಂದ ಶ್ರೀಲಂಕಾಕ್ಕೆ, ಶ್ರೀಲಂಕಾದಿಂದ ಭಾರತಕ್ಕೆ ಕಾಳು ಮೆಣಸು ಬರುತ್ತಿದೆ ಎಂದರು. ತಪಾಸಣಾ ಘಟಕಗಳು ಗುಣಮಟ್ಟ ಪರಿಶೀಲಿಸಿ ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ಖಾತ್ರಿ ಪಡಿಸಿಕೊಂಡು ಈ ರೀತಿಯ ಕಾಳು ಮೆಣಸನ್ನು ತಿರಸ್ಕರಿಸಬಹುದಾಗಿದೆ. ಆದರೆ ಹೀಗಾಗದೆ ಬೆಳೆಗಾರರಿಗೆ ತೊಂದರೆಯಾಗುತ್ತಿರುವುದರಿಂದ ಪ್ರಧಾನ ಮಂತ್ರಿಗಳು ಹಾಗೂ ವಾಣಿಜ್ಯ ಸಚಿವರ ಗಮನ ಸೆಳೆದಿರುವುದಾಗಿ ಮಾದಯ್ಯ ತಿಳಿಸಿದರು.
ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್ ಮಾತನಾಡಿ, ಅರೆಬಿಕಾ ಕಾಫಿ ಬೆಳೆಗೆ ಒಂದು ಏಕರೆಗೆ 80 ಸಾವಿರ ರೂ. ಖರ್ಚು ಮಾಡಿದರೆ, ಬೆಳೆಗಾರನಿಗೆ 65 ಸಾವಿರ ರೂ.ಗಳಷ್ಟೆ ದೊರಕುತ್ತಿದೆ. ನಷ್ಟವಾಗುತ್ತಿರುವ 15 ಸಾವಿರ ರೂ.ಗಳನ್ನು ಕಾಳುಮೆಣಸಿನ ಮೂಲಕ ಪಡೆಯಲು ಅವಕಾಶವಿತ್ತಾದರು ಇದೀಗ ಆಮದು ಹಾವಳಿಯಿಂದಾಗಿ ಬೆಲೆ ಸಂಫೂರ್ಣವಾಗಿ ಕುಸಿದಿದೆ ಎಂದು ವಿಷಾದಿಸಿದರು.
ಹಿಂದೆ ಉಪ ಬೆಳೆಯಾಗಿದ್ದ ಕಾಳುಮೆಣಸು ಇಂದು ಬೆಳೆಗಾರರ ಜೀವನಾಂಶದ ಪ್ರಮುಖ ಬೆಳೆಯಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟರು. ಸಾರ್ಕ್ ದೇಶಗಳ ಆಮದು ನೀತಿಯ ಪ್ರಕಾರ ಕೃಷಿ ಉತ್ಪನ್ನಗಳಿಗೆ ಶೇ.70 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಶ್ರೀಲಂಕಾದ ಮೂಲಕ ಆಮದು ಮಾಡಿಕೊಂಡರೆ ಶೇ.8 ರಷ್ಟು ತೆರಿಗೆ ಮಾತ್ರ ಪಾವತಿಸಬೇಕಾಗುತ್ತದೆ. ಇದೇ ಕಾರಣಕ್ಕೆ 270 ರೂ. ಮೌಲ್ಯದ ವಿಯೆಟ್ನಾಂ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು. ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳು ಮೆಣಸನ್ನು ಭಾರತದ ಕಾಳು ಮೆಣಸು ಎಂದು ಮಾರಾಟ ಮಾಡುತ್ತಿರುವುದು ದೊಡ್ಡ ವಂಚನೆಯಾಗಿದೆ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಬೆಳೆಗಾರರು ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಬೆಳೆಗಾರರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಬೆಳೆಗಾರರ ಸಂಘದ ಅಧ್ಯಕ್ಷರಾದ ನಂದಿನೆರವಂಡ ದಿನೇಶ್ ಮಾತನಾಡಿ, ಕಾಳು ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವ ವಿಚಾರದಲ್ಲಿ
ಜನಪ್ರತಿನಿಧಿಗಳು ರಾಜಕಾರಣ ಮಾಡದೆ, ಬೆಳೆಗಾರರ ಹಿತವನ್ನು ಕಾಯಬೇಕಾಗಿದೆ. ಅಲ್ಲದೆ, ಸರ್ಕಾರದ ಬೊಕ್ಕಸಕ್ಕೆ ಶೇ.62 ರಷ್ಟು ತೆರಿಗೆ ನಷ್ಟವಾಗುತ್ತಿರುವುದನ್ನು ತಡೆಯಬೇಕಾಗಿದೆ ಎಂದು ತಿಳಿಸಿದರು.
ಸಂಘದ ಶನಿವಾರಸಂತೆ ಅಧ್ಯಕ್ಷರಾದ ಪುಟ್ಟಸ್ವಾಮಿ ಮಾತನಾಡಿ, ಮಧ್ಯವರ್ತಿಗಳು ವಂಚನೆಯಲ್ಲಿ ತೊಡಗಿದ್ದು, ಕಲಬೆರಕೆ ಕಾಳು ಮೆಣಸಿನಿಂದಾಗಿ ಬೆಲೆ ಕುಸಿದಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶಿವ ಶಂಕರ್ ಉಪಸ್ಥಿತರಿದ್ದರು.







