ಮಡಿಕೇರಿ : ಸಿ ಮತ್ತು ಡಿ ವರ್ಗದ ಭೂ ಹಕ್ಕು ನೀಡಲು ಒತ್ತಾಯ

ಮಡಿಕೇರಿ,ಅ.6 :ರಾಜ್ಯ ಸರ್ಕಾರ ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ನೆಲೆ ಕಂಡುಕೊಂಡವರಿಗೆ ಭೂ ಮಂಜೂರಾತಿ ಮಾಡಲು ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ತಹಸೀಲ್ದಾರರುಗಳು ಈ ಬಗ್ಗೆ ಒಂದು ವಾರದ ಒಳಗೆ ಕಾರ್ಯಪ್ರವೃತ್ತರಾಗದಿದ್ದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಗಮನ ಸೆಳೆಯುವುದಾಗಿ ಭೂ ರಹಿತ ಕೃಷಿಕರ ಸಂಘಟನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷರಾದ ಎ.ಟಿ. ಮಾದಪ್ಪ, 2011-12ನೇ ಸಾಲಿನಿಂದ ಕೊಡಗು ಜಿಲ್ಲೆಯ ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ವಾಸಿಸುತ್ತಿರುವವರ ಪರವಾಗಿ ನಮ್ಮ ಸಂಘಟನೆ ಹೋರಾಟ ನಡೆಸಿದ ಪರಿಣಾಮವಾಗಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಭೂ ಮಂಜೂರಾತಿಗೆ ಆದೇಶ ಹೊರಡಿಸಿದ್ದಾರೆ. ಈ ವಿಚಾರದಲ್ಲಿ ಸಲಹೆ ನೀಡಿದ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಎ.ಕೆ. ಸುಬ್ಬಯ್ಯ ಅವರ ಪಾತ್ರ ಮತ್ತು ಕಾಗೋಡು ತಿಮ್ಮಪ್ಪ ಅವರ ಇಚ್ಛಾಶಕ್ತಿ ಪ್ರಮುಖವಾಗಿದೆ ಎಂದರು.
ಇದು ನಮ್ಮ ಸಂಘಟನೆಯ ಹೋರಾಟದ ಫಲವಾಗಿದ್ದು, ಇತರ ಸಂಘಟನೆಗಳು ತಮ್ಮ ಹೋರಾಟದ ಫಲಶ್ರುತಿ ಎಂದು ಹೇಳಿಕೊಳ್ಳುತ್ತಿರುವುದನ್ನು ಖಂಡಿಸುವುದಾಗಿ ತಿಳಿಸಿದರು. 2012 ರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಭೂ ರಹಿತ ಕೃಷಿಕರ ಸಂಘ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಿ ಮತ್ತು ಡಿ ವರ್ಗದ ಭೂಮಿಯಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿತ್ತು. ಇದಕ್ಕೆ ಯಾವುದೇ ಸ್ಪಂದನ ದೊರಕದೆ ಇದ್ದಾಗ ಶಾಸಕ ಕೆ.ಜಿ.ಬೋಪಯ್ಯ ಅವರ ಸಲಹೆಯಂತೆ ಹಿರಿಯ ವಕೀಲರಾದ ಎ.ಕೆ. ಸುಬ್ಬಯ್ಯ ಅವರ ಮೂಲಕ 27 ಮಂದಿ ಅರ್ಜಿದಾರರ ಭೂ ಮಂಜೂರಾತಿಯ ಮೊಕದ್ದಮೆಗಳ ಕಡತವನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಲಾಯಿತು. ಈ ಸಂಬಂಧ ರಾಜ್ಯ ಕಂದಾಯ ಸಚಿವರು, ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ನ್ಯಾಯಾಲಯದಿಂದ ನೋಟಿಸ್ ನಿಡಲಾಯಿತು. ಅಲ್ಲದೆ, ವಿಧಾನಸಭೆಯಲ್ಲಿ ಸಿ ಮತ್ತು ಡಿ ವರ್ಗದ ವಿಚಾರವಾಗಿ ಪ್ರಸ್ತಾಪ ನಡೆಯಿತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಕಾಳಜಿ ತೋರಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವವರು ದಾಖಲಾತಿ ಒದಗಿಸುವಂತೆ ಸರ್ಕಾರದಿಂದ ಆದೇಶ ಹೊರಡಿಸಿದ್ದಾರೆ.
ಆದರೆ, ಕೆಲವು ಸಂಘಟನೆಗಳು ಸರ್ಕಾರದ ಸುತ್ತೋಲೆಯ ಲಾಭ ಪಡೆದು ತಮ್ಮಿಂದಲೆ ಎಲ್ಲಾ ಆಗಿದೆಯೆಂದು ಹೇಳಿಕೆ ನೀಡುತ್ತಿರುವುದು ಖಂಡನೀಯವೆಂದು ಮಾದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಸಚಿವರ ಆದೇಶ ಇನ್ನು ಒಂದು ವಾರದ ಒಳಗೆ ಪಾಲನೆಯಾಗದಿದ್ದಲ್ಲಿ ಮತ್ತೆ ಸಚಿವರ ಗಮನ ಸೆಳೆದು ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ. ಕಂದಾಯ ಇಲಾಖೆಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂದು ಎ.ಟಿ.ಮಾದಪ್ಪ ಇದೇ ಸಂದರ್ಭ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಜಿ.ಎ.ಇಬ್ರಾಹಿಂ, ಕಾರ್ಯದರ್ಶಿ ದಿಲೀಪ್ ಕುಮಾರ್, ಉಪ ಕಾರ್ಯದರ್ಶಿ ಸಿ.ಎ.ತಮ್ಮಯ್ಯ ಹಾಗೂ ಸದಸ್ಯರಾದ ಎ.ಎಸ್.ದೇವಯ್ಯ ಉಪಸ್ಥಿತರಿದ್ದರು.







