ಎಸ್‍ಎನ್‍ಡಿಪಿ ಮಹಾಸಭೆ : ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ವಾಸುದೇವ ಕರೆ

ಮಡಿಕೇರಿ, ಅ. 6: ಶ್ರೀನಾರಾಯಣ ಗುರುಗಳ ಪರಿಪಾಲಕ ಸಮಾಜದ ಪ್ರತಿಯೊಬ್ಬರು ಪ್ರತಿಯೊಂದು ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬೆಳವಣಿಗೆಯನ್ನು ಕಾಣಬೇಕು ಎಂದು ಎಸ್‍ಎನ್‍ಡಿಪಿ ಅಧ್ಯಕ್ಷರಾದ ಟಿ.ಆರ್.ವಾಸುದೇವ ಕರೆ ನೀಡಿದ್ದಾರೆ.
ನಗರದ ಹೊಟೇಲ್ ಸಮುದ್ರ ಸಭಾಂಣಗದಲ್ಲಿ ನಡೆದ ಎಸ್‍ಎನ್‍ಡಿಪಿ ಮಡಿಕೇರಿ ಶಾಖೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿರುವ ಎಸ್‍ಎನ್‍ಡಿಪಿ ಸಂಘಟನೆ ಇತರ ಸಂಘಟನೆಗಳಿಗೆ ಮಾದರಿಯಾಗಿ ಬೆಳೆಯುತ್ತಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮಾಜದ ಬಂಧುಗಳು ಸಮಾಜಿಕವಾಗಿ ಮತ್ತು ರಾಜಕೀಯವಾಗಿ ಬೆಳವಣಿಗೆಯನ್ನು ಕಾಣಬೇಕಿದೆ ಎಂದರು. ಪ್ರತಿಯೊಂದು ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಇತರರೊಂದಿಗೆ ಬೆರೆತು ಬೆಳೆಯಬೇಕು ಎಂದು ವಾಸುದೇವ ಸಲಹೆ ನೀಡಿದರು.
ಎಸ್‍ಎನ್‍ಡಿಪಿ ಪ್ರಮುಖರಾದ ಸುಕುಮಾರ್ ಮಾತನಾಡಿ ವಿದ್ಯಾಭ್ಯಾಸವಿಲ್ಲದ ಕಾಲಗಟ್ಟದಿಂದಲೂ ನಮ್ಮ ಧರ್ಮ ಹೆಚ್ಚು ಜ್ಞಾನವನ್ನು ಹೊಂದಿತ್ತು. ಆದರೆ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಲ್ಲಿ ವಿಫಲತೆಯನ್ನು ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಂಘಟನೆಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಎಸ್‍ಎನ್‍ಡಿಪಿ ಕಾರ್ಯದರ್ಶಿ ಸುಜಾತ ಶಿವರಾಮ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.







