ನ.1 ರಂದು ಅಧಿಕೃತ ನಾಡಧ್ವಜ ಹಾರಿಸುವಂತೆ ಜೆಡಿಎಸ್ ಆಗ್ರಹ
ಬೆಂಗಳೂರು, ಅ.7: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ರೂಪಿಸಿ ಕಾನೂನು ಚೌಕಟ್ಟು ನೀಡಲು ಸರಕಾರ ರಚಿಸಿರುವ ಸಮಿತಿಯ ವರದಿ ಆದಷ್ಟು ಬೇಗ ಪಡೆದು, ನ.1 ರಂದು ವಿಧಾನಸೌಧದ ಮೇಲೆ ಅಧಿಕೃತ ನಾಡಧ್ವಜ ಹಾರಿಸಬೇಕು ಎಂದು ಬೆಂಗಳೂರು ನಗರ ಜನತಾದಳ(ಜಾತ್ಯತೀತ) ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ನಗರ ಜಿಲ್ಲಾ ಅಧ್ಯಕ್ಷ ಆರ್.ಪ್ರಕಾಶ್, ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಧ್ವಜವನ್ನು ಕಾನೂನು ಚೌಕಟ್ಟಿನೊಳಗೆ ತರಲಾಗುತ್ತದೆ ಹಾಗೂ ಅದಕ್ಕೆ ಸಾಂವಿಧಾನಬದ್ಧ ಚೌಕಟ್ಟು ನೀಡಲಾಗುತ್ತದೆ ಎಂದು ಹೇಳಿದ್ದರು. ಅದಕ್ಕಾಗಿ, 6 ಜನರ ಸಮಿತಿಯನ್ನು ರಚಿಸಿ, ನಾಡಧ್ವಜದ ವಿನ್ಯಾಸ ಮತ್ತು ಬಣ್ಣ ಕುರಿತು ವರದಿ ಸಲ್ಲಿಸಲು ತಿಳಿಸಲಾಗಿತ್ತು ಎಂದರು.
ಸಮಿತಿ ರಚನೆ ಮಾಡಿ ತಿಂಗಳುಗಳು ಕಳೆಯುತ್ತಿದೆ. ಅಲ್ಲದೆ, ಈಗ ಕನ್ನಡ ರಾಜ್ಯೋತ್ಸವ ಆಚರಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಇದುವರೆಗೂ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಿದೆಯಾ, ಸಭೆಗಳನ್ನು ನಡೆಸಿದೆಯಾ ಎಂಬುದು ಬಹಿರಂಗಗೊಳಿಸಿಲ್ಲ ಎಂದ ಅವರು, ಕೆಂಪು, ಹಳದಿ ಬಣ್ಣದ ಧ್ವಜದ ಬದಲಿಗೆ ಬೇರೆ ವಿನ್ಯಾಸದ ಧ್ವಜ ರಾಜ್ಯದ ಜನರು ಒಪ್ಪಲು ತಯಾರಿಲ್ಲ. ಹೀಗಿರುವಾಗ ಪ್ರಸ್ತುತವಿರುವ ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಸರಕಾರ ಏಕೆ ಮೀನಾಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತ್ಯೇಕ ನಾಡಧ್ವಜ ಹೊಂದುವುದು ಸಂವಿಧಾನ ವಿರೋಧಿಯಲ್ಲ. ಸಂವಿಧಾನದಲ್ಲಿ ನಾಡಧ್ವಜ ಅಥವಾ ಪ್ರತ್ಯೇಕ ಧ್ವಜ ಹೊಂದಲು ಅಡ್ಡಿಯಿಲ್ಲ. ಆದರೆ, ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ರಾಷ್ಟ್ರಧ್ವಜಕ್ಕಿಂತ ಮೇಲ್ಮಟ್ಟದಲ್ಲಿ ಮತ್ತೊಂದು ಧ್ವಜ ಹಾರಿಸುವಂತಿಲ್ಲ. ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಬಹುದು ಎಂದು ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಸಮಿತಿ ವರದಿಯನ್ನು ತರಿಸಿಕೊಂಡು ಕಾನೂನಾತ್ಮಕವಾಗಿ ನಮ್ಮ ನಾಡಧ್ವಜವನ್ನು ಅಂಗೀಕರಿಸಬೇಕು. ಹಾಗೂ ನ.1 ರಂದು ಸರಕಾರಿ ಕಚೇರಿಗಳು, ಶಾಲಾ-ಕಾಲೇಜು ಹಾಗೂ ವಿಧಾನಸೌಧದ ಮೇಲೆ ಸಂವಿಧಾನಾತ್ಮಕವಾಗಿ ನಮ್ಮ ನಾಡಧ್ವಜವನ್ನು ಹಾರಿಸುವಂತೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಮುಖ್ಯಮಂತ್ರಿ ಇದನ್ನು ಕಾರ್ಯರೂಪಕ್ಕೆ ತರದಿದ್ದಲ್ಲಿ ಪಕ್ಷದ ಕಾರ್ಯಕರ್ತರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು, ವಿಚಾರವಂತರು, ವಿದ್ಯಾರ್ಥಿಗಳು ಸೇರಿ ನ.1 ರಂದು ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ನಾಡಧ್ವಜವನ್ನು ವಿಧಾನಸೌಧದ ಮೇಲೆ ಹಾರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.







