ದೇವಭೂಮಿ ದ್ವಾರಕಾದಲ್ಲಿ ದೇಶದ ಮೊದಲ ಸಾಗರ ಪೊಲೀಸ್ ತರಬೇತಿ ಸಂಸ್ಥೆಯ ಸ್ಥಾಪನೆ
ಪ್ರಧಾನಿ ಮೋದಿ ಘೋಷಣೆ

ದ್ವಾರಕಾ,ಅ.7: ಗುಜರಾತ್‌ನಲ್ಲಿ ಹೊಸದಾಗಿ ರಚನೆಯಾಗಿರುವ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ದೇಶದ ಮೊದಲ ಸಾಗರ ಪೊಲೀಸ್ ತರಬೇತಿ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪ್ರಕಟಿಸಿದರು.
ನಗರದ ಕ್ರಿಕೆಟ್ ಮೈದಾನದಲ್ಲಿ ಭಾರೀ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೋಡಕ್ ಸಮೀಪ ತಲೆಯೆತ್ತಲಿರುವ ಈ ಸಂಸ್ಥೆಯು ದೇಶಾದ್ಯಂತದ ಸಾಗರ ಪೊಲೀಸರಿಗೆ ತರಬೇತಿಯನ್ನು ನೀಡಲಿದೆ ಎಂದು ತಿಳಿಸಿದರು.
ದೇಶದ ಸಮುದ್ರ ತೀರಗಳ ಭದ್ರತೆಗಾಗಿ ಸಾಗರ ಪೊಲೀಸ್ ಪಡೆಯನ್ನು ಆಧುನೀಕರಿಸಲು ಸರಕಾರವು ಶ್ರಮಿಸುತ್ತಿದೆ. ಈ ಪಡೆಯು ಕರಾವಳಿಯುದ್ದಕ್ಕೂ ಐದು ಕಿ.ಮೀ.ಗಡಿ ಯೊಳಗೆ ಭದ್ರತೆಯನ್ನು ಒದಗಿಸುವುದರಿಂದ ಪೊಲೀಸ್ ಪಡೆಯ ತರಬೇತಿಗೆ ಹೋಲಿಸಿ ದರೆ ವಿಭಿನ್ನವಾಗಿದೆ. ಭಾರತೀಯ ವಾಯುಪಡೆಯು ಜಾಮನಗರದಲ್ಲಿ ತನ್ನ ಪೈಲಟ್‌ಗಳಿಗೆ ನೀಡುತ್ತಿರುವ ತರಬೇತಿಯ ರೀತಿಯಲ್ಲಿ ಈ ಸಂಸ್ಥೆಯು ಸಾಗರ ಪೊಲೀಸರನ್ನು ತರಬೇತುಗೊಳಿಸಲಿದೆ ಎಂದರು.
ಇದಕ್ಕೂ ಮುನ್ನ ಪ್ರಧಾನಿಯವರು ರಿಮೋಟ್ ಮೂಲಕ 5,825 ಕೋ.ರೂ.ವೆಚ್ಚದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಿಲಾನ್ಯಾಸವನ್ನು ನೆರವೇರಿಸಿದರು.





