ಅರಣ್ಯ ಮಹಾ ವಿವಿಗೆ ಅತ್ಯುನ್ನತ ಸ್ಥಾನ: ಡಾ.ಪಿ.ನಾರಾಯಣ ಸ್ವಾಮಿ
ಬೆಂಗಳೂರು, ಅ.7: ಶಿವಮೊಗ್ಗದಲ್ಲಿರುವ ಅರಣ್ಯ ಮಹಾವಿದ್ಯಾನಿಲಯ ಭಾರತೀಯ ಅರಣ್ಯ ಶಾಸ್ತ್ರ ಸಂಶೋಧನೆ ಹಾಗೂ ಶಿಕ್ಷಣ ಸಂಸ್ಥೆ(ಐಸಿಎಆರ್)ಯು ಅತ್ಯುನ್ನತ ಎ++ ಶ್ರೇಯಾಂಕಿತ ವಿವಿಗಳಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಶಿವಮೊಗ್ಗದಲ್ಲಿರುವ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ.ಪಿ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಕೃಷಿ ವಿಶ್ವವಿದ್ಯಾನಿಲಯವಾಗಿ 2012 ರಲ್ಲಿ ಆರಂಭವಾಗಿ, ಶೈಕ್ಷಣಿಕ ಸಂಶೋಧನಾತ್ಮಕ ಹಾಗೂ ವಿಸ್ತರಣಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವ ಕೃಷಿ ತೋಟಗಾರಿಕೆ, ಅರಣ್ಯಶಾಸ್ತ್ರ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸೇರಿದಂತೆ ಸಮಗ್ರ ಕೃಷಿ ಕಡೆಗೆ ವಿವಿ ಮುನ್ನಡೆಯುತ್ತಿದೆ. 993 ಪದವಿ, 66 ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿಧ 14 ಶಾಖೆಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. 26 ಸಂಶೋಧನಾ ವಿದ್ಯಾರ್ಥಿಗಳು 5 ಡಾಕ್ಟರೇಟ್ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಇತ್ತೀಚಿಗೆ ಐಸಿಎಆರ್‌ನಿಂದ ರಾಷ್ಟ್ರದ 21 ಅರಣ್ಯಶಾಸ್ತ್ರ ಸಂಶೋಧನಾ ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸಿ ಐದು ವಿಶ್ವವಿದ್ಯಾನಿಲಯಗಳನ್ನು ಅತ್ಯುತ್ತಮ ಶ್ರೇಯಾಂಕಿತ ವಿವಿಗಳು ಎಂದು ಗುರುತಿಸಿದೆ. ಅದರಲ್ಲಿ ಶಿವವೊಗ್ಗದ ಅರಣ್ಯ ಮಹಾವಿದ್ಯಾಲಯವು ಒಂದಾಗಿದೆ. ಈ ಮೂಲಕ ರಾಷ್ಟ್ರಮಟ್ಟದ ಪ್ರಸಿದ್ಧಿ ಪಡೆದಿದೆ ಎಂದು ಅವರು ಹೇಳಿದರು.
ಅರಣ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡಿ, ಗಿಡ-ಮರಗಳನ್ನು ಸಂರಕ್ಷಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡಿ, ತಮ್ಮ ಕನಸು ನನಸು ಮಾಡಿಕೊಳ್ಳಬಹುದು. ಅರಣ್ಯ ಸಂರಕ್ಷಿಸಲು ಮಾನವ ಸಂಪನ್ಮೂಲ ಹೆಚ್ಚೆಚ್ಚು ಬೆಳೆಸುವ ಉದ್ದೇಶದಿಂದ ಈ ವಿವಿ ಆರಂಭಿಸಿದ್ದು, ಅಕ್ಟೋಬರ್‌ಗೆ 32 ವರ್ಷ ಪೂರೈಸಿದೆ ಎಂದರು.
ಪಶ್ಚಿಮ ಘಟ್ಟಗಳ ವೈವಿದ್ಯ ನಿಸರ್ಗತಾಣಗಳಲ್ಲಿ ಸಮರ್ಪಣಾಭಾವದಿಂದ ಕೆಲಸ ಮಾಡಲು ಬಯಸುವವರು ಇಲ್ಲಿ ಅರಣ್ಯಶಾಸದಲ್ಲಿ ತರಬೇತಿ ಪಡೆಯಬಹುದು. ನಿತ್ಯಹರಿದ್ವರ್ಣ ಧ್ಯೇಯಗಳೊಂದಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲಗಳನ್ನು ನಿರಂತರವಾಗಿ ನಿರ್ವಹಣೆ ಮಾಡಲು ವಿವಿ ಶ್ರಮಿಸುತ್ತಿದೆ ಎಂದು ವಿವರಿಸಿದರು.







