ನಮ್ಮ ಸೇನಾ ಪಡೆ ಗಸ್ತು ನಡೆಸುತ್ತಿದೆ: ಚೀನಾ
ಡೋಕಾ ಲಾ ಬಿಕ್ಕಟ್ಟು

ಬೀಜಿಂಗ್, ಅ. 2: ಭಾರತದೊಂದಿಗೆ ಇತ್ತೀಚೆಗೆ ಗಡಿಬಿಕ್ಕಟ್ಟು ಸಂಭವಿಸಿದ್ದ ಸ್ಥಳದ ಸಮೀಪ ಪೀಪಲ್ಸ್ ಲಿಬರೇಶನ್ ಆರ್ಮಿ ರಸ್ತೆ ವಿಸ್ತರಿಸುತ್ತಿರುವ ಬಗೆಗಿನ ಮಾಧ್ಯಮ ವರದಿ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಚೀನಾ, ದೇಶದ ಪ್ರಾದೇಶಿಕ ಹಕ್ಕುಗಳನ್ನು ರಕ್ಷಿಸಲು ಡೋಕಾ ಲಾ ವಲಯದಲ್ಲಿ ತನ್ನ ಸೇನಾ ಪಡೆ ಗಸ್ತು ನಡೆಸುತ್ತಿದೆ ಎಂದು ಹೇಳಿದೆ. ಡೋಕಾ ಲಾ ಇಂದಿಗೂ ಚೀನ ನಿಯಂತ್ರಣದಲ್ಲಿ ಇದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪ್ರಸಕ್ತ ಗಡಿ ಒಪ್ಪಂದದಂತೆ ಪ್ರಾದೇಶಿಕ ಹಕ್ಕು ರಕ್ಷಿಸಲು ಡೋಕಾ ಲಾದಲ್ಲಿ ಚೀನಾ ಗಡಿ ರಕ್ಷಣಾ ಪಡೆ ಯಾವಾಗಲೂ ಗಸ್ತು ನಡೆಸುತ್ತಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
ಡೋಕಾ ಲಾ ಯಾವತ್ತೂ ಚೀನಾದ ಒಂದು ಭಾಗವಾಗಿರುವುದರಿಂದ ಯಾವುದೇ ವಿವಾದ ಇಲ್ಲ. ಇದು ಯಾವಾಗಲೂ ಚೀನಾದ ಪರಿಣಾಮಕಾರಿ ಹಾಗೂ ಸಮಂಜಸ ಆಡಳಿತದಲ್ಲೇ ಇರುತ್ತದೆ ಎಂದು ಅದು ಹೇಳಿದೆ.
ಡೋಕಾ ಲಾ ವಲಯದಲ್ಲಿ ಸಹಜ ಸ್ಥಿತಿ ಇದೆ. ಆಗಸ್ಟ್ 28ರಂದು ಸೇನಾ ಪಡೆಗಳನ್ನು ಹಿಂದೆ ತೆಗೆದ ಬಳಿಕ ಮುಖಾಮುಖಿ ಸ್ಥಳ ಹಾಗೂ ಅದರ ಸನಿಹದ ಸ್ಥಳಗಳಲ್ಲಿ ಯಾವುದೇ ಹೊಸ ಬದಲಾವಣೆ ಸಂಭವಿಸಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾಧ್ಯಮಗಳ ವರದಿ ಬಗ್ಗೆ ಪ್ರತಿಕ್ರಿಯಿಸಿ ಈ ಹೇಳಿಕೆ ಟ್ವೀಟ್ ಮಾಡಿದ್ದಾರೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆ ಬಗೆಗಿನ ಅಭಿಪ್ರಾಯ ತಪ್ಪು ಎಂದು ಅವರು ಹೇಳಿದ್ದಾರೆ.
ಭಾರತ ಹಾಗೂ ಚೀನಾದ ಸೇನೆಗಳು 73 ದಿನಗಳ ಕಾಲ ಮುಖಾಮುಖಿಯಾದ ಸ್ಥಳದಿಂದ 12 ಕಿ.ಮೀ. ದೂರದಲ್ಲಿ ಪಿಎಲ್‌ಐ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಿದೆ ಎಂದು ಭಾರತೀಯ ಸೇನೆ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವರ ವೈಮಾನಿಕ ಸಮೀಕ್ಷೆ
ಆಗಸ್ಟ್ 28ರಂದು ಭಾರತ ಹಾಗೂ ಚೀನ ಸೇನೆ ಹಿಂದೆಗೆದ ಬಳಿಕ ಡೋಕಾ ಲಾದಲ್ಲಿ ಯಥಾಸ್ಥಿತಿ ಇದೆ ಎಂದು ಕೇಂದ್ರ ಸರಕಾರ ಹೇಳಿದ ದಿನದ ಬಳಿಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಡೋಕಾ ಲಾ-ನಾಥುಲಾ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
ಭಾರತ-ಚೀನಾ ಸೇನಾ ಪಡೆ ನಡುವೆ ಬಿಕ್ಕಟ್ಟು ಉಂಟಾದ ಡೋಕಾ ಲಾ ಹಾಗೂ ಸಮೀಪದ ಪ್ರದೇಶಗಳಿಂದ ಉಭಯ ರಾಷ್ಟ್ರಗಳು ಸೇನೆ ಹಿಂದೆಗೆದ ಬಳಿಕ ಯಾವುದೇ ಹೊಸ ಬೆಳವಣಿಗೆ ಸಂಭವಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿಕೆ ನೀಡಿತ್ತು.







