ನಗರದ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಕ್ರಮ: ಎಸ್ಪಿ ಡಾ.ಪಾಟೀಲ್

ಉಡುಪಿ, ಅ.7: ಉಡುಪಿ ನಗರ ಮತ್ತು ಮಣಿಪಾಲದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುವ ನಿಟ್ಟಿನಲ್ಲಿ 10ದಿನಗಳೊಳಗೆ ಸರ್ವೆ ನಡೆಸಿ ಈ ತಿಂಗಳ ಅಂತ್ಯದೊಳಗೆ ಸೂಚನಾ ಫಲಕಗಳನ್ನು ಅಳವಡಿಸಲಾಗುವುದೆಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ದೂರವಾಣಿ ಕರೆಗೆ ಪ್ರತಿಕ್ರಿಯಿಸಿದರು. ಈಗಾಗಲೇ ನಗರ ಸಂಚಾರ ಹಾಗೂ ಮಣಿಪಾಲ ಠಾಣೆಯ ಅಧಿಕಾರಿ ಗಳಿಗೆ ದ್ವಿಚಕ್ರ ಹಾಗೂ ಕಾರುಗಳ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿ ಸುವ ನಿಟ್ಟಿ ಸರ್ವೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಸ್ಥಳೀಯ ವರ್ತಕರ ಜೊತೆ ಕೂಡ ಚರ್ಚಿಸಿ ಪಾರ್ಕಿಂಗ್ ಸ್ಥಳಗಳ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದರು.
ಮಟ್ಕಾ ದಂಧೆ ವಿರುದ್ಧ ಕಠಿಣ ಕ್ರಮ ಜರಗಿಸುವ ನಿಟ್ಟಿನಲ್ಲಿ ಒಂದು ವರ್ಷ ಅವಧಿಯಲ್ಲಿ ಜಿಲ್ಲೆಯಲ್ಲಿ ಮಟ್ಕಾ ಜುಗಾರಿಗೆ ಸಂಬಂಧಿಸಿ ಬಂಧಿಸಲ್ಪಟ್ಟ 278 ಮಟ್ಕಾ ಬುಕ್ಕಿಗಳನ್ನು ಮತ್ತು ಅದರ ಕಿಂಗ್‌ಪಿನ್‌ಗಳನ್ನು ಇಂದು ಆಯಾ ಪೊಲೀಸ್ ಠಾಣೆಗೆ ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಉಡುಪಿಯಲ್ಲಿ ಬಸ್‌ಗಳ ಕರ್ಕಶ ಹಾನ್ ವಿರುದ್ಧ ಕ್ರಮ ತೆಗೆದುಕೊಳ್ಳು ವಂತೆ ಸಾರ್ವಜನಿಕರು ಕರೆ ಮಾಡಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈಗಾಗಲೇ 836 ಬಸ್‌ಗಳ ವಿರುದ್ಧ ಕ್ರಮ ಜರಗಿಸಲಾಗಿದೆ. ಮುಂದೆ ಕೂಡ ಇದರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಉಡುಪಿ ಸಂಚಾರ ಬಾಳಿಗಾ ಫಿಶ್‌ನೆಟ್ ಮತ್ತು ಅಂಬಾಗಿಲು ಜಂಕ್ಷನ್ ಬಳಿ ಮತ್ತು ಮಣಿಪಾಲ ಎಂಐಟಿ ಬಸ್ ನಿಲ್ದಾಣ ಬಳಿ ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಸಿಬ್ಬಂದಿಗಳ ನೇಮಕ, ಮಣಿ ಪಾಲ ಎಂಐಟಿ, ಟೈಗರ್ ಸರ್ಕಲ್ನಲ್ಲಿ ಪಾರ್ಕಿಂಗ್ ಸಮಸ್ಯೆ, ಉಡುಪಿ ಆಭರಣ- ಕಾಪೋರೇಷನ್ ಬ್ಯಾಂಕ್, ಮಸೀದಿ ರಸ್ತೆ ಪಾರ್ಕಿಂಗ್ ಸಮಸ್ಯೆ, ಉದ್ಯಾವರ, ಬ್ರಹ್ಮಾವರ, ಉಪ್ಪೂರು ಬಳಿ ರಾ.ಹೆ.ಯಲ್ಲಿ ವಾಹನ ಸವಾರರು ವಿರುದ್ಧ ಧಿಕ್ಕಿನಲ್ಲಿ ಸಂಚಾರಿಸುವ ಕುರಿತು ಸಾರ್ವಜನಿಕರು ಕರೆ ಮಾಡಿದರು.
28 ಸಾರ್ವಜನಿಕ ಕರೆಗಳು: ಇಂದಿನ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 28 ಕರೆಗಳು ಬಂದವು. ಫೋನ್ ಇನ್ ಕಾರ್ಯ ಕ್ರಮದ ಪರಿಣಾಮ ಕಳೆದ ವಾರ ಒಂದು ಮಟ್ಕಾ ಪ್ರಕರಣದಲ್ಲಿ ಓರ್ವ ಸೆರೆ, 3 ಜುಗಾರಿ ಪ್ರಕರಣದಲ್ಲಿ 11 ಮಂದಿ ಬಂಧನ, 3 ಗಾಂಜಾ ಸೇವನೆ ಪ್ರಕರಣ ದಲ್ಲಿ ಮೂವರ ಬಂಧನ, ಕುಡಿದು ವಾಹನ ಚಲಾಯಿಸಿದ 40 ಮಂದಿ, ಹೆಲ್ಮೆಟ್ ಧರಿಸದ 1097 ಸವಾರರು, ಅತಿವೇಗದಿಂದ ಚಲಾಯಿಸಿದ 71 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಮಲ್ಪೆಪೊಲೀಸ್ ಠಾಣಾ ವ್ಯಾಪ್ತಿಯ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ವೇಳೆ ಕಳವಾಗಿರುವ ಕಾಣಿಕೆ ಡಬ್ಬಿಯನ್ನು ಪತ್ತೆ ಮಾಡುವಂತೆ ಸಾರ್ವ ಜನಿಕರೊಬ್ಬರು ಕರೆ ಮಾಡಿದರು. ಉಡುಪಿ ನಗರದಲ್ಲಿ ನಿರ್ದಿಷ್ಟ ಬುಲೆಟ್ ಕರ್ಕಶ ಶಬ್ದ ಮಾಡಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದರು.
ಬೈಂದೂರು ನಾವುಂದ, ಕೋಟ, ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಹಾವಳಿ, ಶಂಕರನಾರಾಯಣ ಹಾಗೂ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ಬೈಂದೂರು ನಾವುಂದ ಪರಿಸರದಲ್ಲಿ ಅಕ್ರಮ ಮರಳುಗಾರಿಕೆ, ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಳ್ಳಿಹೊಳೆ ಶೆಟ್ಟಿಪಾಲು ಪರಿಸರದಲ್ಲಿ ಮರಗಳನ್ನು ಕಡಿದು ಅಕ್ರಮ ಗಣಿಗಾರಿಕೆ, ಆವರ್ಸೆ ಪರಿಸರದಲ್ಲಿ ಅಕ್ರಮ ಗಣಿಗಾರಿಕೆ, ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ಜುಗಾರಿ, ಕೋಟ ಸಾಲಿಗ್ರಾಮದಲ್ಲಿ ಅಕ್ರಮ ಬಡ್ಡಿ ದಂಧೆ ಕುರಿತ ದೂರುಗಳು ಬಂದವು.
ಮಣಿಪಾಲ ಹೋಟೆಲ್ ಎದುರು ಸಾರ್ವಜನಿಕವಾಗಿ ಸಿಗರೇಟು ಸೇವನೆ, ಉಡುಪಿ ದೊಡ್ಡಣ್ಣಗುಡ್ಡೆ ಪೊಲೀಸ್ ವಸತಿಗೃಹದ ಬಳಿ ಧೂಮಪಾನ ಮಾಡುತ್ತ ಸಂಜೆ ವೇಳೆ ವಾಕಿಂಗ್ ಮಾಡುವ ಮಹಿಳೆಯರಿಗೆ ಚುಡಾಯಿಸುತ್ತಿರುವ ಬಗ್ಗೆ, ಉಡುಪಿ ಸರಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯಾಧಿಕಾರಿಯವರಿಗೆ ಕರ್ತವ್ಯ ನಿರ್ವಹಿಸಲು ರೋಗಿಗಳ ಸಂಬಂಧಿಕರಿಂದ ಅಡೆತಡೆ ಎದುರಾಗುವ ಬಗ್ಗೆ ದೂರುಗಳು ಬಂದವು.
ಹಿರಿಯಡ್ಕ ಸಿಬ್ಬಂದಿಯೊರ್ವರು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ವರ ಜೊತೆ ಶಾಮೀಲಾಗಿರುವ ಕುರಿತು ಸಾರ್ವಜನಿಕರು ಕರೆ ಮಾಡಿ ಎಸ್ಪಿ ಅವರಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಅಂತಹ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದರು.
ಉತ್ತರ ಭಾರತದ ಕಾರ್ಮಿಕರ ಪರಿಶೀಲನೆ
ಕಳೆದ ಬಾರಿಯ ಕರೆಗೆ ಸಂಬಂಧಿಸಿ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಮರಳುಗಾರಿಕೆ ಕೆಲಸಕ್ಕಾಗಿ ಬಂದಿರುವ ಉತ್ತರ ಭಾರತದ ಕಾರ್ಮಿಕರನ್ನು ಕರೆಸಿ ಅವರ ಗುರುತಿನ ಚೀಟಿಗಳನ್ನು ಪರಿಶೀಲನೆ ನಡೆಸಲಾಗಿದೆ. ಅವರ ಬಳಿ ಗುರು ತಿನ ಚೀಟಿಗಳು ಇರುವುದು ತಿಳಿದುಬಂದಿದೆ. ಮುಂದೆ ಈ ರೀತಿ ಹೊರಗಡೆ ಯಿಂದ ಕಾರ್ಮಿಕರನ್ನು ಕರೆಸಿಕೊಳ್ಳುವವರು ಅವರ ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಇದಕ್ಕೆ ಗುತ್ತಿಗೆದಾರರೇ ಹೊಣೆ ಆಗುತ್ತಾರೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ತಿಳಿಸಿದರು.
ಬೇರೆ ದೇಶದ ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು ಮತ್ತು ಅವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.







